ನವದೆಹಲಿ: ಪ್ರಜಾಸತ್ತೆಯ ಮಹಾ ಹಬ್ಬವಾಗಿರುವ ಲೋಕಸಭಾ ಚುನಾವಣೆಯ ನಿರ್ಣಾಯಕ ಹಂತವಾಗಿರುವ ಮತದಾನ ಆರಂಭವಾಗಿದೆ. ದೇಶದ 102 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ಆರಂಭವಾಗಿದ್ದು, ದಾಖಲೆ ಪ್ರಮಾಣದಲ್ಲಿ ಮತದಾನ ಮಾಡುವಂತೆ ಪ್ರಧಾನಿ ಕರೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, 2024ರ ಲೋಕಸಭೆ ಚುನಾವಣೆ ಇಂದಿನಿಂದ ಆರಂಭ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 102 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಈ ಸ್ಥಾನಗಳಲ್ಲಿ ಮತ ಚಲಾಯಿಸುವವರೆಲ್ಲರೂ ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸುವಂತೆ ಒತ್ತಾಯಿಸಿದ್ದಾರೆ. ವಿಶೇಷವಾಗಿ ಯುವ ಮತ್ತು ಮೊದಲ ಬಾರಿಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ. ಪ್ರತಿ ಮತವು ಎಣಿಕೆಯಾಗುತ್ತದೆ ಮತ್ತು ಪ್ರತಿ ಧ್ವನಿಯು ಮುಖ್ಯವಾಗಿದೆ ಎಂದವರು ಪ್ರತಿಪಾದಿಸಿದ್ದಾರೆ.