ದೊಡ್ಡಬಳ್ಳಾಪುರ: 6ನೇ ವೇತನ ಆಯೋಗದ ಕುರಿತು ಸರ್ಕಾರ ಹಾಗೂ ಸಾರಿಗೆ ಇಲಾಖೆ ನೌಕರರ ಹಗ್ಗಜಗ್ಗಾಟ ನಡುವೆ ಮುಷ್ಕರ ಶುಕ್ರವಾರ ಮೂರನೇ ದಿನವೂ ಮುಂದುವರಿಯಿತು.
ದೊಡ್ಡಬಳ್ಳಾಪುರ ಡಿಪೋದಿಂದ ನಿರ್ವಹಣೆ ಮಾಡಲಾಗುತ್ತಿದ್ದ 92 ರೂಟ್ ಗಳ ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿವೆ, ಪ್ರಯಾಣಿಕರು ದೂರದ ಊರುಗಳಿಗೆ ಖಾಸಗಿ ವಾಹನಗಳನ್ನು ಬಳಸುತ್ತಿದ್ದಾರೆ. ಅಲ್ಲದೆ ಆಟೋ, ಮಿನಿ ಬಸ್, ಟಿಟಿ, ಕಾರುಗಳ ಸಂಚಾರ ತೀವ್ರಗತಿಯಲ್ಲಿ ಓಡಾಟ ನಡೆಸುತ್ತಿವೆ. ಗುರುವಾರ ಚಿಕ್ಕಬಳ್ಳಾಪುರ ಹಾಗೂ ದಾಬಸ್ ಪೇಟೆಗೆ ಎರಡು ಸಾರಿಗೆ ಬಸ್ಸುಗಳು ಕಾರ್ಯನಿರ್ವಹಿಸಿದ್ದು, ಚಾಲಕ ಹಾಗೂ ನಿರ್ವಾಹ ಕರ್ತವ್ಯ ಮುಗಿಸಿ ಮನೆಗೆ ಮರಳಿದ್ದಾರೆ.
ಮತ್ತೊಂದೆಡೆ ಚಿಕ್ಕಬಳ್ಳಾಪುರ ಡಿಪೋ ವ್ಯಾಪ್ತಿಗೆ ಒಳಪಡುವ 50 ಮಂದಿ ತರಬೇತಿ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಇದರನ್ವಯ ದೊಡ್ಡಬಳ್ಳಾಪುರ ಡಿಪೋಗೆ ಸೇರಿದ ನೌಕರರಾದ ಡಿ.ಎಸ್.ಅಂಬರೀಶ್, ಅಬ್ದುಲ್ ಸಾ ಆವಟಿ, ಎಸ್.ಎನ್.ಗೋವಿಂದಪ್ಪ, ವೈ.ಪಿ.ಶಂಕರಪ್ಪ, ಸುರೇಂದ್ರ, ಬಿ.ಎನ್.ರಾಘವೇಂದ್ರ, ಕೆ.ಅಶೋಕ, ಕೆ.ಗೀತಾ, ಎಂ.ಎಸ್.ಶ್ರೀನಿವಾಸ, ಮಹಾನಂದ, ನಾಗರಾಜ ಅಯ್ಯಣ್ಣ, ಶರಣಪ್ಪ, ಜೆ.ಆರ್.ಸತ್ಯನಾರಾಯಣ ಸೇರಿದಂತೆ 13 ಮಂದಿಗೆ ನೋಟಿಸ್ ನೀಡಿದ್ದು, ಕೆಲಸಕ್ಕೆ ಹಾಜರಾಗದಿದ್ದಲ್ಲಿ ಕ್ರಮ ಜರುಗಿಸುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ ಎನ್ನಲಾಗಿದೆ.