ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯೇ? ಇಂಥದ್ದೊಂದು ನಿರೀಕ್ಷೆ ಪ್ರದೇಶ ಕಾಂಗ್ರೆಸ್ ಕಾರ್ಯಕರ್ತರದ್ದು.
ಹಲವಾರು ರೀತಿಯ ಕಾನೂನು ಹೊಡೆತ, ಅಪರಾಧ ಸಾಬೀತಿಗೂ ಮುನ್ನವೇ ಜೈಲು ಶಿಕ್ಷೆಯಂತಹಾ ಕರಳ ಪರಿಸ್ಥಿತಿ ಎದುರಿಸಿರುವ ಡಿಕೆಶಿ ಬಗ್ಗೆ ಪಕ್ಷದ ಸೇನಾನಿಗಳಿಗೆ ಅದೇನೋ ಅಕ್ಕರೆ. ಇವರೇ ಮುಂದಿನ ಸಿಎಂ ಆಗಬೇಕೆಂಬ ಹೆಬ್ಬಯಕೆ. ಈ ಮಹಾದಾಸೆ ಬೆಂಗಳೂರಿನಲ್ಲಿಂದು ನಡೆದ ಕೆಪಿಸಿಸಿ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅನಾವರಣವಾಯಿತು.
ಡಿಕೆಶಿವರು ಮುಂದೆ ಸಿಎಂ ಆಗಬೇಕು ಎಂದು ಒಂದಷ್ಟು ಜನ ಘೋಷಣೆ ಕೂಗಿದರೆ, ಡಿಕೆಶಿ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಮತ್ತಷ್ಟು ಮಂದಿ ಜೈಕಾರ ಹಾಕಿದರು. ಈ ಸನ್ನಿವೇಶ ಕಂಡ ಪಕ್ಷದ ಸಾರಥಿ ಡಿ.ಕೆ.ಶಿವಕುಮಾರ್ ಪುಳಕಿತರಾದರು.
ತಮ್ಮ ಭಾಷಣದ ಸರದಿ ಬಂದಾಗ ಈ ಬಗ್ಗೆ ಪ್ರಸ್ತಾಪಿಸಿದ ಡಿಕೆಶಿ, ಪರೋಕ್ಷವಾಗಿ ಸಿಎಂ ಆಗಬೇಕೆಂಬ ಆಸೆಯನ್ನು ಹೊರಹಾಕಿದರು. ಬೆಂಬಲಿಗರು ಡಿಕೆ ಸಿಎಂ ಆಗ್ಬೇಕು ಅಂತಿದ್ದಾರೆ. ನನಗೆ ಅದೆಲ್ಲವೂ ಬೇಕಿಲ್ಲ. ಮೊದಲು ಪಕ್ಷವನ್ನ ಕಟ್ಟಬೇಕು ಎಂದರು.
ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಬೇಕು. ಇದಕ್ಕಾಗಿ ನಾವು ಇಂದು ಹೋರಾಟ ರೂಪಿಸಬೇಕಿದೆ ಎಂದ ಅವರು, ಕಾಂಗ್ರೆಸ್ ತೊರೆದವರಿಗೆ ಮತ್ತೆ ಪಕ್ಷ ಸೇರಿಕೊಳ್ಳಲು ಅವಕಾಶ ಕೊಡುತ್ತಿದ್ದೇವೆ ಎಂದರು. ಅನ್ ಕಂಡೀಷನಲ್ ಆಗಿ ಸೇರ್ಪಡೆಗೆ ಅವಕಾಶವಿದೆ ಎಂದು ನೀಡಿದ ಬಹಿರಂಗ ಆಹ್ವಾನ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೂ ಕಾರಣವಾಗಿದೆ.
ಪಕ್ಷ ಬಲಪಡಿಸಲು ಕಾರ್ಯಕರ್ತರಿಗೆ ಕರೆ ನೀಡಿದ ಡಿ.ಕೆ.ಶಿವಕುಮರ್, ಅವಕಾಶಗಳನ್ನ ನಾವು ಹುಡುಕಿ ಹೋಗಬೇಕಿಲ್ಲ. ಬಿಜೆಪಿ ಸರ್ಕಾರವೇ ಆ ಅವಕಾಶ ತಂದುಕೊಟ್ಟಿದೆ. ಅದನ್ನ ನಾವು ಸದುಪಯೋಗ ಪಡಿಸಿಕೊಳ್ಬೇಕು. ಇದು ಇವತ್ತು ನಮ್ಮ ಕೈಯಲ್ಲೇ ಇದೆ ಎಂದರು.
ರೈತರು, ಕಾರ್ಮಿಕರು,ವ್ಯಾಪಾರಿಗಳು ಕಷ್ಟದಲ್ಲಿದ್ದಾರೆ. ಸಮಾಜದಲ್ಲಿರುವ ಎಲ್ಲಾ ವರ್ಗಗಳು ಸಂಕಷ್ಟಕ್ಕೊಳಗಾಗಿವೆ. ಈ ಸಮಸ್ಯೆಗಳಿಗೆ ನಾವುವ ಪರಿಹಾರ ಹುಡಕುಬೇಕಿದೆ. ಸರ್ಕಾರದ ವಿರುದ್ಧ ನಿರಂತರ ಹೋರಾಟ ಮಾಡಬೇಕಿದೆ. ಸರ್ಕಾರದಲ್ಲಿ ಹೊಸ ಬದಲಾವಣೆ ತರಬೇಕಿದೆ ಎಂದು ಡಿಕೆಶಿ ಹೇಳಿದರು.
ಕಾಂಗ್ರೆಸ್ ತೊರೆದವರಿಗೆ ಮತ್ತೆ ಪಕ್ಷ ಸೇರಿಕೊಳ್ಳಲು ಅವಕಾಶ ಕೊಡುತ್ತಿದ್ದೇವೆ ಎಂದ ಅವರು, ಅನ್ ಕಂಡೀಷನಲ್ ಆಗಿ ಸೇರ್ಪಡೆಗೆ ಅವಕಾಶವಿದೆ ಎಂದು ನೀಡಿದ ಬಹಿರಂಗ ಆಹ್ವಾನ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೂ ಕಾರಣವಾಗಿದೆ.