ಬೆಂಗಳೂರು: ದತ್ತಪೀಠದ ವಿವಾದ ಪರಿಹಾರ ಮಾಡುವ ವಿಚಾರವಾಗಿ ರಾಜ್ಯ ಸಚಿವ ಸಂಪುಟ ಉಪಸಮಿತಿಯ ವರದಿಯನ್ನು ಸಂಪುಟ ಸಭೆಯಲ್ಲಿ ಮಂಡಿಸಿರುವುದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಸ್ವಾಗತಿಸಿದ್ದಾರೆ. ಇದು 4 ದಶಕಗಳ ಸುದೀರ್ಘ ಹೋರಾಟಕ್ಕೆ ಸಿಕ್ಕಿದ ಗೆಲುವು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಸಂಪುಟ ಉಪಸಮಿತಿ ರಚನೆಯಾಗಿತ್ತು. ಆ ಉಪ ಸಮಿತಿಯು ಸಮಸ್ಯೆ ಪರಿಹಾರಕ್ಕೆ ಶಿಫಾರಸು ಮಾಡಿದೆ. ಉಪಸಮಿತಿ ಕೊಟ್ಟಿರುವ ವರದಿಯ ಕುರಿತು ಹೈಕೋರ್ಟ್ ಮುಂದೆ ಪ್ರಮಾಣಪತ್ರ ಸಲ್ಲಿಸಲು ಸಚಿವ ಸಂಪುಟ ಸಭೆಯು ತೀರ್ಮಾನಿಸಿದ್ದು ಸಂತಸ ತಂದಿದೆ ಎಂದು ಅವರು ತಿಳಿಸಿದ್ದಾರೆ.
ದತ್ತಪೀಠಕ್ಕೆ ಅರ್ಚಕರ ನೇಮಕ ಮಾಡುವಂತೆ ಸುದೀರ್ಘ ಕಾಲದಿಂದ ಒತ್ತಾಯಿಸಲಾಗುತ್ತಿತ್ತು. ಆದರೆ, ಸಿದ್ದರಾಮಯ್ಯರ ನೇತೃತ್ವದ ಹಿಂದಿನ ಕಾಂಗ್ರೆಸ್ ಸರಕಾರವು ಹಿಂದೂಗಳ ಈ ಕೋರಿಕೆಯನ್ನು ಪುರಸ್ಕರಿಸಲಿಲ್ಲ. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರವು ಅದನ್ನು ಪುರಸ್ಕರಿಸಿದೆ. ಇದು ದೀರ್ಘ ಕಾಲದ ಹೋರಾಟಕ್ಕೆ ಸಂದ ಜಯ ಎಂದು ಸಿ.ಟಿ.ರವಿ ಬಣ್ಣಿಸಿದ್ದಾರೆ.






















































