ಬೆಂಗಳೂರು: ಕೋವಿಡ್ ನೆಪದಲ್ಲಿ ಕಾಂಗ್ರೆಸ್‌ನ ಬಸ್ ಯಾತ್ರೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ
ಕೋವಿಡ್ ಮುಂಜಾಗ್ರತಾ ಕ್ರಮ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ನಾವು ಮೇಕೆದಾಟು ಪಾದಯಾತ್ರೆ ಮಾಡುವಾಗ ಕೋವಿಡ್ ಎಂದರು. ಆದರೆ ಯಾರಿಗೆ ಸೋಂಕು ತಗುಲಿ ಸತ್ತರು. ನಮ್ಮ ವಿರುದ್ಧ ಪ್ರಕರಣ ದಾಖಲಿಸಿ, ಕೇಸ್ ಹಾಕಿ ಪಾದಯಾತ್ರೆ ನಿಲ್ಲಿಸಿದ್ದರು. ಆಗ ದಿನನಿತ್ಯ ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಯಾರಿಗೆ ಸೋಂಕು ತಗುಲಿತ್ತು. ಈಗ ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡುತ್ತಿದ್ದು, ಅವರಿಗೆ ಸಿಗುತ್ತಿರುವ ಜನ ಬೆಂಬಲವನ್ನು ಸಹಿಸಲು ಬಿಜೆಪಿ ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.
ಈಗ ಕೆಲವು ಕಡೆ ಕೋವಿಡ್ ಇರಬಹುದು. ಆದರೂ ಬಿಜೆಪಿ ನಾಯಕರ ಕಾರ್ಯಕ್ರಮ ಹೇಗೆ ನಡೆಯುತ್ತಿದೆ? ಅವರ ನಾಯಕರು ರಾಜ್ಯಕ್ಕೆ ಬರುತ್ತಿಲ್ಲವೇ? ಕಾರ್ಯಕ್ರಮ ಮಾಡುತ್ತಿಲ್ಲವೇ? ಮೊದಲು ಅವರ ಕಾರ್ಯಕ್ರಮ ನಿಲ್ಲಿಸಲಿ. ಸುಮ್ಮನೆ ಆರ್ಥಿಕತೆ ಹಾಳು ಮಾಡಿ, ನಿರುದ್ಯೋಗ ಹೆಚ್ಚಿಸುತ್ತಿದ್ದಾರೆ. ಜನರನ್ನು ಸುಮ್ಮನೆ ಹೆದರಿಸುತ್ತಾರೆ’ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಬಸ್ ಯಾತ್ರೆ ನಿಯಂತ್ರಿಸಲು ಈ ರೀತಿ ಮಾಡುತ್ತಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾವು ಬಸ್ ಯಾತ್ರೆ ಮಾಡಿಯೇ ಮಾಡುತ್ತೇವೆ. ನಮ್ಮ ಯಾತ್ರೆ ಪಾಂಚಜನ್ಯ 2.0 ಆಗಲಿದೆ. ನಾವು ಯಾವುದೇ ಕಾರಣಕ್ಕೂ ಯಾತ್ರೆ ನಿಲ್ಲಿಸುವುದಿಲ್ಲ. ಡಿ. 30 ರಂದು ಕೃಷ್ಣಾ ನದಿ ನೀರು ವಿಚಾರವಾಗಿ ವಿಜಯಪುರದಲ್ಲಿ ಪ್ರತಿಭಟನೆ ಇದೆ. ಜ.2 ರಂದು ಮಹದಾಯಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಹೋರಾಟ ಮಾಡಲಾಗುವುದು. 8 ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮಾವೇಶ ನಡೆಯಲಿದೆ. ನಂತರ ನಾವು ಬೆಳಗಾವಿಯಿಂದ ಬಸ್ ಯಾತ್ರೆ ಮಾಡುತ್ತೇವೆ. ಇದನ್ನು ಯಾರಿಂದಲೂ ನಿಲಿಸಲು ಸಾಧ್ಯವಿಲ್ಲ. ನಿಲ್ಲಿಸಿದರೆ, ನಿಲ್ಲಿಸಲಿ. ಜನ ಇದ್ದಾರೆ. ಅವರ ಮುಂದೆ ಹೋಗುತ್ತೇವೆ. ಇವರು ಮಾಡಿರುವ ಅಕ್ರಮ, ಅನ್ಯಾಯ, ಲೂಟಿಯನ್ನು ಜನ ನೋಡಿದ್ದಾರೆ. ಅದನ್ನು ಅವರ ಮುಂದೆ ಇಡುತ್ತೇವೆ ಎಂದರು.
ನಿನ್ನೆ ಕೆಂಪಣ್ಣ ಅವರನ್ನು ಬಂಧಿಸಿದ್ದಾರೆ. ನಾನು ಕೂಡ ಯತ್ನಾಳ್ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ. ಇದುವರೆಗೂ ನನಗೆ ನೊಟೀಸ್ ಬಂದಿಲ್ಲ. ಆದರೆ ಕೆಂಪಣ್ಣ ಅವರ ವಿಚಾರದಲ್ಲಿ ಸತ್ಯ ಹೇಳಿದ್ದಕ್ಕೆ ವಾರೆಂಟ್ ಹೊರಡಿಸಿ ಬಂಧಿಸಿದ್ದಾರೆ. ರಾಜ್ಯದ ಗುತ್ತಿಗೆದಾರರು ಈ ವಿಚಾರದಲ್ಲಿ ಜಾಗರೂಕರಾಗಿರಿ. ಇದು ಕೇವಲ ಕೆಂಪಣ್ಣ ಒಬ್ಬರ ಮೇಲಿನ ದೌರ್ಜನ್ಯ ಅಲ್ಲ. ಗುತ್ತಿಗೆದಾರರಿಗೆ ದಿನನಿತ್ಯ ಆಗುತ್ತಿರುವ ಕಿರುಕುಳ ಎಂದರು.
ಈ ಸರ್ಕಾರವನ್ನು ಕಿತ್ತೊಗೆಯಲು ಭ್ರಷ್ಟಾಚಾರದ ಮಾಹಿತಿ ಒದಗಿಸಿಕೊಡಬೇಕು. ಭ್ರಷ್ಟಾಚಾರ ವಿಚಾರವಾಗಿ ಪ್ರತಾಪ್ ಸಿಂಹ ಹಾಗೂ ಶ್ರೀನಿವಾಸ್ ಪ್ರಸಾದ್ ನೀಡಿದ ಹೇಳಿಕೆ ವಿಚಾರವಾಗಿ ಅವರಿಗೆ ಯಾಕೆ ನೊಟೀಸ್ ನೀಡಿಲ್ಲ. ಅವರಿಬ್ಬರೂ ಸಂಸದರು. ಚುನಾವಣೆಯಲ್ಲಿ 15 ಕೋಟಿ ನೀಡಲಾಗಿದೆ, ಉಪಕುಲಪತಿಗಳ ಹುದ್ದೆಗೆ 5-6 ಕೋಟಿ ನೀಡಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಯಾಕೆ ವಿಚಾರಣೆ ಇಲ್ಲ? ಇದು ಹಿರಿಯ ಹಾಗೂ ಪ್ರಜ್ಞಾವಂತ ಸಂಸದರ ಹೇಳಿಕೆಯಾಗಿದೆ. ಇದನ್ನು ಲೋಕಾಯುಕ್ತ, ಇಡಿ, ಐಟಿ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಬೇಕು. ತನಿಖೆ ಮಾಡಬೇಕು. ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಡಿಕೆಶಿ ಆಗ್ರಹಿಸಿದರು
























































