ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳಿಗೆ ವಿಶ್ವಗುರು ಬಸವಣ್ಣ, ಕನಕದಾಸ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಡಿ.ದೇವರಾಜ ಅರಸು ಹೆಸರುಗಳನ್ನು ನಾಮಕರಣ ಮಾಡುವ ಕುರಿತು ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಆದಿಕವಿ ಮಹರ್ಷಿ ವಾಲ್ಮೀಕಿ, ಅಕ್ಕಮಹಾದೇವಿ, ರಾಣಿ ಚನ್ನಮ್ಮ, ಕೃಷ್ಣದೇವರಾಯ, ಕುವೆಂಪು, ವಿಶ್ವೇಶ್ವರಯ್ಯ, ಗಂಗೂಬಾಯಿ ಹಾನಗಲ್, ರಾಜೀವ್ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರುಗಳ ಗಳ ಹೆಸರುಗಳನ್ನು ಈಗಾಗಲೇ ನಾಮಕರಣ ಮಾಡಲಾಗಿದೆ. ಸಾಮಾಜಿಕ ನ್ಯಾಯದ ಹರಿಕಾರರೆಂದು ಹೆಸರಾಗಿರುವ ವಿಶ್ವಗುರು-ಸಾಂಸ್ಕೃತಿಕ ನಾಯಕ ಬಸವಣ್ಣನವರು, ಶೂದ್ರ ಸಿದ್ಧಾಂತದ ಹರಿಕಾರರಾದ ಕನಕದಾಸರು, ಹಿಂದುಳಿದ ಸಮುದಾಯಗಳಿಗೆ ಚೈತನ್ಯ ನೀಡಿದ ರಾಜ್ಯದ ಅಭಿವೃದ್ಧಿಗೆ ಚಲನಶೀಲತೆ ತಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದೇವರಾಜ ಅರಸು ಅವರ ಹೆಸರುಗಳನ್ನು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ನಾಮಕರಣ ಮಾಡುವ ಅಗತ್ಯವಿದೆ ಎಂದವರು ಪ್ರತಿಪಾದಿಸಿದ್ದಾರೆ.
ಈ ಕುರಿತು ಪರಿಶೀಲಿಸಿ, ಸೂಕ್ತ ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟದ ಮುಂದೆ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ ಹೊರಡಿಸಿರುವ ಟಿಪ್ಪಣಿಯ ಪ್ರತಿಯನ್ನು ಸಿಎಂ ಕಚೇರಿ ತನ್ನ ‘X’ ಹಂಚಿಕೊಂಡಿದೆ.
ಇದೇ ವೇಳೆ, ಸಂಗೊಳ್ಳಿ ರಾಯಣ್ಣ ಹೆಸರನ್ನು ಸಿಎಂ ಸಿದ್ದರಾಮಯ್ಯ ಮರೆತಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಸಿಎಂ ಕಚೇರಿ ಹಂಚಿಕೊಂಡಿರುವ ಟಿಪ್ಪಣಿ ಕುರಿತು ಪ್ರತಿಕ್ರಿಯೆ ನೆಟ್ಟಿಗರು, ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಹೆಸರನ್ನು ಕರ್ನಾಟಕದ ಒಂದು ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಬೇಕು’ ಎಂದು ಮನವಿ ಮಾಡಿದ್ದಾರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಹೆಸರನ್ನು ಕರ್ನಾಟಕದ ಒಂದು ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಬೇಕೆಂದು ಮನವಿ.
— puttaiah C (@c_puttaiah95023) October 31, 2025




















































