ಮೈಸೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಬಿಜೆಪಿಯವರೇ ಕಾರಣ ಎಂದು ವಿಶ್ಲೇಷಿಸಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜೆಡಿಎಸ್ ಮುಗಿಸುವುದು ಬಿಜೆಪಿಯವರ ಉದ್ದೇಶವಾಗಿದ್ದು, ಅದಕ್ಕಾಗಿ ವ್ಯವಸ್ಥಿತ ರೀತಿಯಲ್ಲಿಯೇ ಸಂಚು ರೂಪಿಸಲಾಗಿದೆ ಎಂದು ಬಣ್ಣಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ ಬೈರೇಗೌಡ, ಕಳೆದ ವಿಧಾನಸಭಾ ಚುನಾವಣಾ ವೇಳೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದ್ದಾಗ ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿ ಅವರು 97 ಸಾವಿರ ಮತ ಪಡೆದಿದ್ದರು. ಈ ಉಪಚುನಾವಣೆಯಲ್ಲಿ ಬಿಜೆಪಿ-ಜಾತ್ಯತೀತ ಜನತಾದಳ ಒಂದಾಗಿದ್ದರಿಂದ ಕನಿಷ್ಠ 10 ಸಾವಿರ ಮತಗಳಾದರೂ ಹೆಚ್ಚಾಗಬೇಕಿತ್ತು. ಆದರೆ ಜೆಡಿಎಸ್ ಅಭ್ಯರ್ಥಿಯ ಮತಗಳು 85 ಸಾವಿರಕ್ಕೆ ಇಳಿದ್ದಿದರೂ ಹೇಗೆ? ಬಿಜೆಪಿಯ ಮತಗಳು ಎಲ್ಲಿ ಹೋದವು? ಎಂದು ಪ್ರಶ್ನಿಸಿದರು.
ಬಿಜೆಪಿಯ ಒಂದು ಮತವೂ ಜೆಡಿಎಸ್‌ಗೆ ಬಂದಿಲ್ಲ ಎಂದು ವಿಶ್ಲೇಷಣೆ ಮಾಡಿರುವ ಕೃಷ್ಣ ಬೈರೇಗೌಡ, ಕುಮಾರಸ್ವಾಮಿ ಪುತ್ರನನ್ನು ಕಣಕ್ಕಿಳಿಸಿದ ಬಿಜೆಪಿಯವರು ತಮ್ಮ ಮತಗಳನ್ನು ಕಾಂಗ್ರೆಸ್‌ಗೆ ಹಾಕಿಸಿದ್ದಾರೆ. ಈ ಮೂಲಕ ಜೆಡಿಎಸ್ ಬೆನ್ನಿಗೆ ಬಿಜೆಪಿಯವರು ಚೂರಿ ಹಾಕಿದ್ದಾರೆ ಎಂದರು.
ಬಿಜೆಪಿಯವರ ಪರೋಕ್ಷ ಬೆಂಬಲ ಇಲ್ಲದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅವರು 25 ಸಾವಿರ ಮತಗಳಿಂದ ಯೋಗೇಶ್ವರ್ ಗೆಲ್ಲುತ್ತಿರಲಿಲ್ಲ ಎಂದರು.