ಬೆಂಗಳೂರು: ರಾಜ್ಯದಲ್ಲಿ ನೂತನ ಸಿಎಂ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಇದೀಗ ಸಂಪುಟ ರಚನೆ ಕಸರತ್ತು ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಇದೇ ವೇಳೆ ಬಿಎಸ್‌ವೈ ಪುತ್ರ ವಿಜಯೇಂದ್ರ ಅವರೂ ಮಂತ್ರಿ ಮಂಡಲ ಪ್ರವೇಶ ಮಾಡ್ತಾರ? ಎಂಬ ಚರ್ಚೆಯೂ ಸಾಗಿದೆ.
ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ತಮ್ಮ ಪುತ್ರನಿಗೆ ಸೂಕ್ತ ಸ್ಥಾನ ನೀಡಬೇಕೆಂಬ ಷರತ್ತನ್ನು ಮುಂದಿಟ್ಟಿದ್ದರೆ ಎನ್ನಲಾಗಿದೆ. ವಿಜಯೇಂದ್ರರನ್ನು ಉಪಮುಖ್ಯಮಂತ್ರಿ ಮಾಡಬೇಕು. ಇಲ್ಲವೇ ಸಚಿರನ್ನಾಗಿಸಿ ಕೈಗಾರಿಕೆ ಅಥವಾ ಗ್ರಾಮೀಣಾಭಿವೃದ್ಧಿ ಖಾತೆ ನೀಡಬೇಕೆಂಬುದೂ ಅವರ ಬಳಗದ ಆಗ್ರಹ.
ಸಚಿವ ಸಂಪುಟದಲ್ಲಿ ವಿಜಯೇಂದ್ರ ಅವರಿಗೆ ಸ್ಥಾನ ನೀಡಲಾಗುತ್ತದೆಯೇ ಇಲ್ಲವೇ ಎನ್ನುವ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಅವರನ್ನು ಸಂಪುಟಕ್ಕೆ ಸೇರಿಸುವ ನಿರ್ಧಾರ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.
ಈ ನಡುವೆ, ಪ್ರಸ್ತುತ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿರುವ ವಿಜಯೇಂದ್ರ ಶಾಸನ ಸಭೆಯ ಸದಸ್ಯರಾಗಿಲ್ಲ. ಹಾಗಾಗಿ ಈಗಲೇ ಅವರನ್ನು ಮಂತ್ರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ದೆಹಲಿ ವರಿಷ್ಠರದ್ದು. ಹಾಗಾಗಿ, ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿ, ಹಾನಗಲ್ ವಿಧಾನಸಭೆ ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಮಾಡಬಹುದೆಂಬ ಸಲಹೆಯನ್ನು ಬಿಎಸ್‌ವೈ ಬಳಗ ಹೈಕಮಾಂಡ್ ಮುಂದಿಟ್ಟಿದೆ ಎನ್ನಲಾಗಿದೆ.