ಯಡಿಯೂರಪ್ಪ ಪ್ರಬಲ ನಾಯಕರಾಗಿದ್ದು ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ, ಬಿಎಸ್‌ವೈ ರಾಜೀನಾಮೆಗೆ ಗಡುವೂ ನೀಡಿಲ್ಲ ಎಂಬುದು ಅರುಣ್ ಸಿಂಗ್ ಸಂದರ್ಶನದಲ್ಲಿ ಗೊತ್ತಾದ ಸಂಗತಿ. ಆದರೆ ದೆಹಲಿಯಲ್ಲಿದ್ದು ನಿರ್ಣಾಯಕ ಪಾತ್ರ ವಹಿಸುತ್ತಿರುವ ಅಮಿತ್ ಶಾ ನಡೆ ಮಾತ್ರ ಇನ್ನೂ ನಿಗೂಢ.
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆಯಲಾಗುತ್ತಾ? ಬದಲಿ ನಾಯಕನನ್ನು ಸಿಎಂ ಮಾಡಿ ಅಚ್ಚರಿಯ ವಿದ್ಯಮಾನಕ್ಕೆ ಬಿಜೆಪಿ ಸಾಕ್ಷಿಯಾಗುತ್ತಾ?
ನಿತ್ಯವೂ ಒಂದಿಲ್ಲೊಂದು ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿರುವ ರಾಜ್ಯ ಭಾರತೀಯ ಜನತಾ ಪಕ್ಷದಲ್ಲಿ ಸಿಎಂ ಬದಲಾವಣೆಯ ಮಾತುಗಳನ್ನೂ ತಳ್ಳಿಹಾಕುವಂತಿಲ್ಲ. ಆದರೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ನೀಡಿದ ವಿಶೇಷ ಸಂದರ್ಶನದಲ್ಲಿ ಗೊತ್ತಾದ ಸಂಗತಿಗಳು ಅಚ್ಚರಿ ಹಾಗೂ ಕುತೂಹಲಕಾರಿ ಬೆಳವಣಿಗೆಗಳತ್ತ ಬೆಳಕುಚೆಲ್ಲಿದೆ.
ಪ್ರಸ್ತುತ ಬಿಜೆಪಿಯಲ್ಲಿ ಏಜ್ ಫ್ಯಾಕ್ಟರ್ ಪರಿಗಣಿಸಲಾಗುತ್ತದೆ. ಅದರಲ್ಲೂ ಹಗರಣಗಳ ಆರೋಪ ಕೇಳಿಬಂದರೆ ಸಂಘ ಹಾಗೂ ಬಿಜೆಪಿಯ ನೇತಾರರು ಅದನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ರಾಜ್ಯ ರಾಜಕಾರಣದಲ್ಲಿನ ವಿಚಾರ ಗಮನಿಸಿದರೂ ಪಕ್ಷದ ಹೈಕಮಾಂಡ್‌ನದ್ದು ಅದೇ ರೀತಿಯ ನಿರ್ಧಾರವಾಗುತ್ತೆ ಎಂಬುದು ರಾಷ್ಟ್ರೀಯ ನಾಯಕರ ಅಭಿಪ್ರಾಯ. ಹೀಗಿರುವಾಗ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ ಮುಂದೆ ಹೇಗಿರಬಹುದು? ಇದುವೇ ಅಚ್ಚರಿ ಹಾಗೂ ಕೌತುಕದ ಪ್ರಶ್ನೆ.
ಅರುಣ್ ಸಿಂಗ್ ಸಂದರ್ಶನ ಹೀಗಿದೆ..
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾಗ್ತಾರ ಎಂಬ ಪ್ರಶ್ನೆಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್, ಅದೇನಿದ್ದರೂ ವದಂತಿಗಳು. ಯಡಿಯೂರಪ್ಪ ಅವರ ರಾಜೀನಾಮೆಗೆ ಹೈಕಮಾಂಡ್ ಯಾವುದೇ ಡೆಡ್‌ಲೈನ್ ನೀಡಿಲ್ಲ. ಅವರು ಈ ವರೆಗೂ ಮುಖ್ಯಮಂತ್ರಿಯಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶಹಬ್ಬಾಸ್‌ಗಿರಿಯ ಸರ್ಟಿಫಿಕೇಟ್ ಕೊಟ್ಟಿದ್ದಾರೆ.
ಯಡಿಯೂರಪ್ಪ ಪ್ರಬಲ ನಾಯಕರಾಗಿದ್ದಾರೆ. ಹಾಗಾಗಿ ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಅರುಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ವಿಚಾರದಲ್ಲಿ ಗೊಂದಲದ ಹೇಳಿಕೆಗಳನ್ನು ನೀಡುತ್ತಿರುವ ಶಾಸಕ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವ ಚಿಂತನೆಯಿದೆ ಎಂದೂ ಅರುಣ್ ಸಿಂಗ್ ತಿಳಿಸಿದ್ದಾರೆ.
ಆದರೆ ಅಮಿತ್‌ಶಾ ತಂತ್ರ..?
ಆದರೆ, ದೆಹಲಿಯಲ್ಲಿನ ಅಮಿತ್‌ಶಾ ಅಂಗಳದಲ್ಲಿನ ಬೆಳವಣಿಗೆಯೇ ವಿಭಿನ್ನ. ಕೆಲ ದಿನಗಳ ಹಿಂದೆ ಡಿನೋಟಿಫಿಕೇಶನ್ ಹಗರಣ ಕುರಿತಂತೆ ಹೈಕೋರ್ಟ್ ನೀಡಿರುವ ನಿರ್ದೇಶನವನ್ನು ಮೋದಿ, ಅಮಿತ್‌ಶಾ, ನಡ್ಡಾ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಸದ್ಯವೇ ಸುಪ್ರೀಂ ಕೋರ್ಟ್‌ನಲ್ಲಿ ಬೆಳವಣಿಗೆಯಾದರೆ? ಎಂಬ ಪ್ರಶ್ನೆಯೂ ಅವರನ್ನು ಕಾಡತೊಡಗಿದೆ. ಹಾಗಾಗಿ ಅದರತ್ತಲೂ ಈ ನಾಯಕರು ಚಿತ್ತ ಹರಿಸಿದ್ದಾರೆ.
ಮುಳುವಾಗುತ್ತಾ ಕೆಆರ್‌ಐಡಿಎಲ್ ಕಳಂಕ?
ಭ್ರಷ್ಟಾಚಾರ ಮುಕ್ತ ಆಡಳಿತದ ಮಂತ್ರ ಪಠಿಸುತ್ತಿರುವ ಬಿಜೆಪಿ ವರಿಷ್ಠರಿಗೆ ಕೆಆರ್‌ಐಡಿಎಲ್ ಹಗರಣ ಅಸಮಾಧಾನ ಉಂಟುಮಾಡಿದೆ. ಭ್ರಷ್ಟಾಚಾರಕ್ಕೆ ಹಾದಿಮಾಡಿಕೊಟ್ಟಿರುವ 4(ಜಿ) ವಿನಾಯಿತಿಗೆ ಹೈಕೋರ್ಟ್’ನಿಂದ ಮೋದಿ ಆಪ್ತ ಹೋರಾಟಗಾರರೇ ತಡೆಯಾಜ್ಞೆ ತಂದಿದ್ದಾರೆ. ಈ ವಿಚಾರದಲ್ಲಿ ನ್ಯಾಯಾಲಯದಲ್ಲಿ ಹೋರಾಡಿ ಪರಿಶುದ್ಧತೆಯನ್ನು ಪ್ರದರ್ಶಿಸುವ ಬದಲು ಪರ್ಯಾಯ ನಡೆಗೆ ಬಿಎಸ್’ವೈ ಆಪ್ತರು ಕಸರತ್ತು ನಡೆಸುತ್ತಿದ್ದಾರೆನ್ನಲಾಗುತ್ತಿದೆ. ಈ ವಿಚಾರ ಅಮಿತ್’ಶಾ ವರೆಗೂ ತಲುಪಿದ್ದು ಒಂದು ವೇಳೆ ಈ ವಿಚಾರದಲ್ಲಿ ಬಿಎಸ್’ವೈ ಯಾವ ನಿರ್ಧಾರ ಕೈಗೊಳ್ಳುತ್ತಾರೆಂಬುದನ್ನೂ ಅವರು ಕಾದುನೋಡುತ್ತಿದ್ದಾರೆ. ಈ ಎಲ್ಲಾ ಸಂಗತಿಗಳನ್ನು ಅಳೆದು ತೂಗಿ ಈ ವಾರಾಂತ್ಯದಲ್ಲಷ್ಟೇ ಅಂತಿಮ ನಿರ್ಧಾರವನ್ನು ಹೈಕಮಾಂಡ್ ಪ್ರಕಟಿಸಲಿದೆ ಎನ್ನುತ್ತಿದೆ ಅಮಿತ್ ಶಾ ಆಪ್ತ ವಲಯ.