ಮೈಸೂರು: ಸಿದ್ದರಾಮಯ್ಯ ತವರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಆಘಾತವಾಗಿದೆ. ವಿಧಾನ ಪರಿಷತ್ತಿನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ. ವಿವೇಕಾನಂದ ಜಯಗಳಿಸಿದ್ದಾರೆ.
ವಿವೇಕಾನಂದ ಅವರು ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ವಿರುದ್ದ 4,622 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಕೆ. ವಿವೇಕಾನಂದ ಅವರು ಜಯಗಳಿಸಿದ್ದಾರೆ. ಅವರು 7,916 ಮತಗಳನ್ನು ಗಳಿಸಿದ್ದಾರೆ. 5ನೇ ಬಾರಿಗೆ ಆಯ್ಕೆ ಬಯಸಿದ್ದ ಕಾಂಗ್ರೆಸ್ ಹುರಿಯಾಳು ಮರಿತಿಬ್ಬೇಗೌಡ ಅವರು 4,658 ಮತಗಳನ್ನಷ್ಟೇ ಪಡೆಯುವಲ್ಲಿ ಶಕ್ತರಾಗಿದ್ದಾರೆ.
ಇದೇ ವೇಳೆ, ಹ.ರ. ಮಹೇಶ್ ಅವರಿಗೆ 338 ಮತಗಳು, ನಾಗಮಲ್ಲೇಶ್ ಅವರಿಗೆ 216 ಮತಗಳು, ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಅವರಿಗೆ 66 ಮತಗಳು, ಮಾಜಿ ಶಾಸಕ ಕೆ.ಸಿ. ಪುಟ್ಟಸಿದ್ದಶೆಟ್ಟಿ ಅವರಿಗೆ 17 ಮತಗಳು ಸಿಕ್ಕಿವೆ.
ಲೋಕಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಅವರ ಗೆಲುವಿಗಾಗಿ ಹರಸಾಹಸ ನಡೆಸಿದ್ದರು. ಆದರೆ, ಗೆಲುವು ಬಿಜೆಪಿ ಅಭ್ಯರ್ಥಿಯ ಪಾಲಾಗಿತ್ತು. ಇದೀಗ ಸತತ ಗೆಲುವು ಸಾಧಿಸುತ್ತಲೇ ಬಂದಿದ್ದ ಕಾಂಗ್ರೆಸ್ ಮೇಲ್ಮನೆಯ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲೂ ಸೋಲುಂಡಿದೆ.






















































