ಅಮರಾವತಿ: ಮಹತ್ವದ ನಿರ್ಧಾರವೊಂದರಲ್ಲಿ ಆಂಧ್ರಪ್ರದೇಶ ಸರ್ಕಾರವು ರಾಜ್ಯ ವಕ್ಫ್ ಮಂಡಳಿಯನ್ನು ವಿಸರ್ಜಿಸಿದೆ. ಚಂದ್ರಬಾಬು ನಾಯ್ಡು ನೇತೃತ್ವದ ಎನ್ಡಿಎ ಸರ್ಕಾರ ಹಿಂದಿನ ಸರ್ಕಾರ ನಾಮನಿರ್ದೇಶನ ಮಾಡಿದ್ದ ರಾಜ್ಯ ವಕ್ಫ್ ಮಂಡಳಿಯನ್ನು ವಿಸರ್ಜಿಸುವ ತೀರ್ಮಾನ ಕೈಗೊಂಡಿದೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ವಕ್ಫ್ ಬೋರ್ಡ್ ರಚನೆ ಮಾಡಿ ಹೊರಡಿಸಿದ್ದ ಜಿಒ ಹಿಂಪಡೆದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಶನಿವಾರ (ನವೆಂಬರ್ 30) ಸರ್ಕಾರಿ ಆದೇಶ ಹೊರಡಿಸಿದೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಂದಿನ ಸರ್ಕಾರವು ಹೈಕೋರ್ಟ್ ಆದೇಶದ ನಂತರ 11 ಸದಸ್ಯರ ವಕ್ಫ್ ಮಂಡಳಿಯನ್ನು ರಚಿಸಿತ್ತು. ಅವರಲ್ಲಿ ಮೂವರು ಚುನಾಯಿತ ಸದಸ್ಯರು ಮತ್ತು ಉಳಿದವರು ನಾಮನಿರ್ದೇಶನಗೊಂಡರು.
ವಕ್ಫ್ ಮಂಡಳಿಯನ್ನು ರಚಿಸಲು ಅನುಸರಿಸಿದ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಮೇಲೆ, ಆಂಧ್ರಪ್ರದೇಶದ ಹೈಕೋರ್ಟ್ ನವೆಂಬರ್ 1, 2023 ರಂದು ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರ ಚುನಾವಣೆಗೆ ತಡೆ ನೀಡಿತು.
ರಾಜ್ಯ ವಕ್ಫ್ ಮಂಡಳಿಯು ಸುದೀರ್ಘ ಕಾಲದಿಂದ ಕಾರ್ಯನಿರ್ವಹಿಸದಿರುವುದು ಹಾಗೂ ಜಿ.ಓ.ನಂ.47ರ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾಗುತ್ತಿರುವ ರಿಟ್ ಅರ್ಜಿಗಳನ್ನು ಪರಿಹರಿಸಲು ಬಾಕಿ ಇರುವ ಕುರಿತು ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಸರ್ಕಾರದ ಗಮನಕ್ಕೆ ತಂದಿದ್ದಾರೆ ಎಂದು ಶನಿವಾರ ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ನಡುವೆ, ಸರ್ಕಾರದ ನಿರ್ಧಾರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಆಂಧ್ರಪ್ರದೇಶದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಎನ್.ಎಂ.ಡಿ.ಫಾರೂಕ್, ಹಿಂದಿನ ಸರಕಾರ ಹೊರಡಿಸಿದ್ದ ಜಿ.ಒ.ವನ್ನು ಹಿಂಪಡೆಯಲಾಗಿದೆ. ವಕ್ಫ್ ಬೋರ್ಡ್ ಸದಸ್ಯರ ನಾಮನಿರ್ದೇಶನವನ್ನು ಪ್ರಶ್ನಿಸಿ ಕೆಲವು ವ್ಯಕ್ತಿಗಳು ಹೈಕೋರ್ಟ್ಗೆ ಮೊರೆ ಹೋದ ನಂತರ, ಅಧ್ಯಕ್ಷರ ಚುನಾವಣೆಗೆ ತಡೆ ನೀಡಿ ಹೈಕೋರ್ಟ್ ಮಧ್ಯಂತರ ಆದೇಶವನ್ನು ನೀಡಿದೆ ಎಂದು ಅವರು ಹೇಳಿದರು.
“ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಸಮ್ಮಿಶ್ರ ಸರ್ಕಾರವು ವಕ್ಫ್ ಆಸ್ತಿಗಳ ರಕ್ಷಣೆ ಮತ್ತು ನಿರ್ವಹಣೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ’ ಎಂದು ಫಾರೂಕ್ ತಿಳಿಸಿದ್ದಾರೆ.