ಬೆಂಗಳೂರು: ಲೋಕಸಭಾ ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪ ತೀವ್ರಗೊಂಡಿದೆ. ಜೊತೆಗೆ ಎದುರಾಳಿ ಪಕ್ಷಗಳ ನಾಯಕರ ವಿರುದ್ಧ ದೂರುಗಳೂ ಸಲ್ಲಿಕೆಯಾಗುತ್ತಿವೆ. ಉಪಮುಖ್ಯಮಂತ್ರಿ ಡಿ,ಕೆ,ಶಿವಕುಮಾರ್ ವಿರುದ್ಧ ಬಿಜೆಪಿ ನಾಯಕವು ನೀತಿ ಸಂಹಿತೆ ಉಲ್ಲಂಘನೆಯ ದೂರು ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಹೋದರ ಡಿಕೆ ಸುರೇಶ್‌ಗೆ ಮತ ನೀಡುವಂತೆ ಮತದಾರರಿಗೆ ಡಿ.ಕೆ. ಶಿವಕುಮಾರ್ ಬೆದರಿಕೆ ಹಾಕಿರುವ ಆರೋಪಿಸಿ ಚುನಾವಣಾ ಆಯೋಗಕ್ಕೆ ಬಿಜೆಪಿ ನಾಯಕರು ದೂರು ನೀಡಿದ್ದಾರೆ. ಕಾವೇರಿ ನೀರು ಸಂಪರ್ಕ, ಸಿಎ ನಿವೇಶನ ಮತ್ತು ಹಕ್ಕುಪತ್ರ ಹಸ್ತಾಂತರಿಸಬೇಕಾದರೆ ಸುರೇಶ್‌ಗೆ ಮತ ನೀಡಬೇಕು ಎಂದು ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಶಿವಕುಮಾರ್ ಬೆದರಿಸಿದ್ದಾರೆ ಎಂಬುದು ಬಿಜೆಪಿಯ ಆರೋಪವಾಗಿದೆ.
ಇದೇ ವೇಳೆ, ಕುಣಿಗಲ್ ಸಮೀಪ ಚಿಕ್ಕರಾಜೇನಹಳ್ಳಿಯಲ್ಲಿ ರೈತರ ಜಮೀನಿಗೆ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯದ ಮೇರೆಗೆ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಿರುವ ಬಿಜೆಪಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ. ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳದ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆಯೂ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.