📝 ಪ್ಯಾಟ್ರಿಕ್ ರಾಜು, ಸಾಮಾಜಿಕ ಕಾರ್ಯಕರ್ತರು
‘ಶಕ್ತಿ”ಗೆ ಒಂದು ವರ್ಷ, ಜನರಲ್ಲಿ ಮೂಡಿದೆ ‘ಹರ್ಷ’. ಹೌದು, ಶಕ್ತಿ ಯೋಜನೆಯ ಅನುಷ್ಠಾನದ ರೂವಾರಿ ರಾಮಲಿಂಗಾರೆಡ್ಡಿರವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಇದೀಗ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಅಡಿಯಲ್ಲಿ ಒಂದು ವರ್ಷದ ಅವಧಿಯಲ್ಲಿ 226 ಕೋಟಿ ಬಾರಿ ರಾಜ್ಯದ ಮಹಿಳೆಯರು ಉಚಿತವಾಗಿ ಪ್ರಯಾಣವನ್ನು ಮಾಡಿದ್ದಾರೆ ಇದೊಂದು ಐತಿಹಾಸಿಕ ದಾಖಲೆಯಾಗಿದೆ.

‘ಶಕ್ತಿ’ ಯೋಜನೆ ಅನುಷ್ಠಾನ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಆಗಿಲ್ಲ ಎಂದು ಟೀಕೆ ಮಾಡುವವರಿಗೆ ಕೆಲವು ವಿಚಾರಗಳನ್ನ ತಿಳಿಸುವಂತಹ ಅವಶ್ಯಕತೆ ಇದೆ. ಸಾರಿಗೆ ಸಚಿವರು ಯೋಜನೆಯ ಅನುಷ್ಠಾನದ ಜೊತೆಯಲ್ಲಿ ಇಲಾಖೆಯ ಪ್ರಗತಿಗೆ ಮತ್ತು ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ ಪರಿಣಾಮವಾಗಿ ಇಷ್ಟೊಂದು ದೊಡ್ಡ ಯೋಜನೆ, ಜಾರಿಗೊಳಿಸಿದ್ದರೂ ಸಹ ಸಾರಿಗೆ ಇಲಾಖೆ ಆರ್ಥಿಕವಾಗಿ ತನ್ನ ಸಾಮರ್ಥ್ಯವನ್ನು ಗಟ್ಟಿಗೊಳಿಸಿದೆ ಎಂಬುದು ಗಮನಾರ್ಹ ಸಂಗತಿ.
ಪಲ್ಲಕ್ಕಿ, ಅಶ್ವಮೇಧ, ಕ್ಲಾಸಿಕ್, ಕಲ್ಯಾಣ ರಥ, ಅಮೋಘವರ್ಷ ಮುಂತಾದ ವಿನೂತನ ಮಾದರಿಯ ಬಸ್ಸುಗಳು ಸಹ ಸೇರ್ಪಡೆಯಾಗಿದೆ. ಇಲ್ಲಿಯ ತನಕ ಸಾರಿಗೆ ನೌಕರರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೃತಪಟ್ಟ ಸಂದರ್ಭದಲ್ಲಿ ನೀಡುತ್ತಿದ್ದ ಪರಿಹಾರದ ಮೊತ್ತವನ್ನು ಒಂದು ಕೋಟಿ ರೂಪಾಯಿಗಳಿಗೆ ಹೆಚ್ಚಿಸಿ ಆ ಕುಟುಂಬಗಳ ಭದ್ರತೆಗೆ ಗಟ್ಟಿಯಾದ ಅಡಿಪಾಯವನ್ನು ಹಾಕಿ ಕೊಟ್ಟಿದ್ದಾರೆ. ಅದೇ ರೀತಿ, ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತಗಳಲ್ಲಿ ಮೃತಪಟ್ಟರೆ ಆ ಈ ಹಿಂದೆ ನೀಡುತ್ತಿದ್ದ ಮೂರು ಲಕ್ಷ ರೂಪಾಯಿಗಳ ಬದಲಿಗೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡುವಂತಹ ಯೋಜನೆ ಜಾರಿಗೊಳಿಸಲಾಗಿದೆ. ಬೇರೆ ಬೇರೆ ಕಾರಣಗಳಿಂದಾಗಿ ಮೃತಪಟ್ಟ ಸಿಬ್ಬಂದಿ ಕುಟುಂಬದ ಕಲ್ಯಾಣ ವಿಮೆ ಯೋಜನೆಯನ್ನು ಮೂರು ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಲಾಗಿದೆ
ಈ ಹಿಂದೆ ಪ್ರತಿ ದಿನ ಕರ್ತವ್ಯ ನಿರ್ವಹಿಸುತ್ತಿದ್ದ 158909 ಟ್ರಿಪ್ ಗಳ ಪ್ರಯಾಣವನ್ನು 169627 ಸಂಖ್ಯೆಗೆ ಹೆಚ್ಚಿಸಿ ಪ್ರಯಾಣಿಕರ ಒತ್ತಡವನ್ನು ನಿಯಂತ್ರಿಸಲಾಗಿದೆ. 9000 ಹುದ್ದೆಗೆ ಅನುಮೋದನೆ ನೀಡಿದ್ದೇವೆ. 6500 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.1844 ಹುದ್ದೆಗಳಿಗೆ ಈಗಾಗಲೇ ನೇಮಕಾತಿ ಆದೇಶ ನೀಡಲಾಗಿದೆ. ಸಾವಿರದ ಇನ್ನೂರ ಎಪ್ಪತ್ತೇಳು ಹಳೆಯ ಬಸ್ಸುಗಳ ಪುನಶ್ಚೇತನ ಮಾಡಲಾಗಿದೆ. 2438 ನೂತನ ಬಸ್ಸುಗಳ ಸೇರ್ಪಡೆಯಾಗಿದೆ. 5800 ಹೊಸ ಬಸ್ಸುಗಳ ಖರೀದಿಗೆ ಅನುಮೋದನೆಯಾಗಿದೆ. 553 ಮೃತ ಸಿಬ್ಬಂದಿಯ ಅವಲಂಬತರಿಗೆ ಅನುಕಂಪದ ಆಧಾರದ ಮೇಲೆ ಇಲಾಖೆಯಲ್ಲಿ ಉದ್ಯೋಗವನ್ನು ಕಲ್ಪಿಸಿಕೊಡಲಾಗಿದೆ. ಜಯದೇವ ಆಸ್ಪತ್ರೆಯೊಂದಿಗೆ ಒಡಂಬಡಿಕೆಯನ್ನ ಮಾಡಿಕೊಂಡು ಚಾಲಕರು ಮತ್ತು ನಿರ್ವಾಹಕರಿಗೆ ಹೃದಯ ತಪಾಸಣೆಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಹೀಗಿದ್ದರೂ ‘ಶಕ್ತಿ’ ಯೋಜನೆ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಿದ್ದಾರೆ. ಕಟ್ಟಡ ಕರ‍್ಮಿಕರು ಗಾರ್ಮೆಂಟ್ಸ್ ನೌಕರರು ಸಣ್ಣಪುಟ್ಟ ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯರು ಮತ್ತು ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮನೆ ಕೆಲಸಗಳನ್ನು ಮಾಡುವ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಹಿಂದೆ, ಆದಾಯದ ಬಹುಪಾಲು ಹಣವನ್ನು ಮಹಿಳೆಯರು ಪ್ರತಿ ತಿಂಗಳು ಬಸ್ ಪ್ರಯಾಣಕ್ಕಾಗಿ ಮೀಸಲಿಡಬೇಕಿತ್ತು. ಆದರೆ ಇದೀಗ ಲಕ್ಷಾಂತರ ಜನರಿಗೆ ಈ ಹೊರೆ ತಪ್ಪಿದೆ.
ಈ ಯೋಜನೆ ಅನುಷ್ಠಾನಕ್ಕೂ ಮುನ್ನ ತುಮಕೂರು ರಸ್ತೆ, ಮೈಸೂರು ರಸ್ತೆ ಮಾಗಡಿ ರಸ್ತೆ ಹೊಸೂರು ರಸ್ತೆ ಮುಂತಾದೆಡೆ ದುಡಿಯುವ ಮಹಿಳೆಯರು ಲಾರಿಗಳಲ್ಲಿ, ತ್ರಿಚಕ್ರ ವಾಹನಗಳಲ್ಲಿ, ಟೆಂಪೋಗಳಲ್ಲಿ ಸರಕುಗಳನ್ನ ತುಂಬಿಕೊಂಡು ಹೋಗುವ ವಾಹನಗಳಲ್ಲಿ ಹೋಗುತ್ತಿದ್ದ ದೃಶ್ಯ ನೋಡುಗರ ಮನಕಲಕುವಂತಿತ್ತು. ಅಂಥವರ ಬದುಕಿಗೂ ಈ ಗ್ಯಾರೆಂಟಿ ಯೋಜನೆ ನಿಜಕ್ಕೂ ‘ಶಕ್ತಿ’ಎನಿಸಿದೆ. ಲಕ್ಷಾಂತರ ಮಂದಿಗೆ ಹಣವಿಲ್ಲದ ಕಾರಣ ಪವಿತ್ರ ಕ್ಷೇತ್ರಗಳ ದರ್ಶನ ಸಾಧ್ಯವೇ ಆಗಿರಲಿಲ್ಲ. ನೂರಾರು ಕಿಲೋಮೀಟರ್ ಪ್ರಯಾಣಕ್ಕಾಗಿ ಸಾವಿರಾರು ರೂಪಾಯಿ ವ್ಯಯಿಸುವ ಸ್ಥಿತಿಯಲ್ಲಿರದ ಲಕ್ಷಾಂತರ ಮಹಿಳೆಯರು ಈಗ ‘ಶಕ್ತಿ’ ಯೋಜನೆ ಜಾರಿ ನಂತರ ತಮ್ಮ ದಶಕಗಳ ಕನಸನ್ನು ಈಡೇರಿಸಿಕೊಂಡಿದ್ದಾರೆ.
ಚುನಾವಣೆಗಳು ಬರುತ್ತದೆ ಹೋಗುತ್ತದೆ, ಫಲಿತಾಂಶಗಳು ಬೇರೆ ಬೇರೆ ಸ್ವರೂಪದಲ್ಲಿರುತ್ತದೆ. ಆದರೆ ಈ ಯೋಜನೆಗಳ ಹಿಂದೆ ಮಾನವೀಯತೆಯ ಸ್ಪರ್ಶವಿದೆ. ಹಾಗಾಗಿ ‘ಶಕ್ತಿ’ ಯೋಜನೆಯನ್ನು ಚುನಾವಣೆಗೆ ಸೀಮಿತಗೊಳಿಸದೆ ನಿರಂತರವಾಗಿ ಮುಂದುವರಿಸುವ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರು ಘೋಷಣೆ ಮಾಡಿರುವುದು ಸಂತಸದ ಸಂಗತಿ.





















































