ಢಾಕಾ: ಕಳೆದ ವರ್ಷದ ಜುಲೈಯಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ಎಸಗಿದ್ದಾರೆ ಎಂಬ ಆರೋಪದ ಮೇಲೆ, ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ಐಸಿಟಿ) ಸೋಮವಾರ ಮಾಜಿ ಪ್ರಧಾನಿ ಶೇಖ್ ಹಸೀನಾ ಹಾಗೂ ಅವರ ಇಬ್ಬರು ಆಪ್ತರನ್ನು ದೋಷಿಗಳೆಂದು ಘೋಷಿಸಿ ಗಲ್ಲು ಶಿಕ್ಷೆ ಪ್ರಕಟಿಸಿದೆ.
ದೋಷಿಗಳಾಗಿ ಹೊರಹೊಮ್ಮಿದ ಇತರರು ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಮತ್ತು ಮಾಜಿ ಪೊಲೀಸ್ ಮಹಾನಿರೀಕ್ಷಕ ಚೌಧರಿ ಅಬ್ದುಲ್ಲಾ ಅಲ್–ಮಾಮುನ್.
ನ್ಯಾಯಮೂರ್ತಿ ಎಂಡಿ ಗೋಲಮ್ ಮೊರ್ತುಜಾ ಮಜುಂದರ್ ನೇತೃತ್ವದ ಮೂರು ಸದಸ್ಯರ ಐಸಿಟಿ–1 ಪೀಠ ತೀರ್ಪು ಪ್ರಕಟಿಸಿತು. ಹಸೀನಾ ವಿಚಾರಣೆಗೆ ಹಾಜರಾಗದೇ ವಿದೇಶದಲ್ಲೇ ಉಳಿದುಕೊಂಡಿದ್ದು, ನ್ಯಾಯಾಲಯದ ಸಮನ್ಸ್‌ಗಳನ್ನು ಪಾಲಿಸಲು ನಿರಾಕರಿಸಿರುವುದು ದಾಖಲಾಗಿದೆ. ಅಸದುಜ್ಜಮಾನ್ ಪರಾರಿಯಾಗಿದ್ದು, ಮಾಮುನ್ ಬಂಧನದಲ್ಲಿದ್ದಾರೆ. ವಿಶೇಷವಾಗಿ, ಮಾಮುನ್ ತಪ್ಪೊಪ್ಪಿಕೊಂಡು ರಾಜ್ಯ ಸಾಕ್ಷಿಯಾದ ಮೊದಲ ಆರೋಪಿಯಾಗಿದ್ದಾರೆ.
ಕೊಲೆಗಳನ್ನು ತಡೆಯುವಲ್ಲಿ ವಿಫಲತೆ ಸೇರಿದಂತೆ ಐದು ಮುಖ್ಯ ಆರೋಪಗಳನ್ನು ಪ್ರಾಸಿಕ್ಯೂಷನ್ ಮಂಡಿಸಿತ್ತು. ಆದರೆ ಹಸೀನಾ ತಮ್ಮ ಮೇಲಿನ ಎಲ್ಲ ಆರೋಪಗಳನ್ನು ನಿರಂತರವಾಗಿ ನಿರಾಕರಿಸುತ್ತ ಬಂದಿದ್ದಾರೆ.























































