ಗಾಜಾ: ದಕ್ಷಿಣ ಗಾಜಾದ ಅಲ್–ಮವಾಸಿ ಪ್ರದೇಶದಲ್ಲಿರುವ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಪ್ಯಾಲೆಸ್ತೀನ್ ಸಂಘಟನೆ ಹಮಾಸ್ ತನ್ನ ಕದನ ವಿರಾಮ ಪ್ರಸ್ತಾಪವನ್ನು ಭಾಗಶಃ ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನಾಂಗೀಯ ಯುದ್ಧವನ್ನು ನಿಲ್ಲಿಸುವಂತೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಗಾಜಾದಲ್ಲಿನ ಸಮರ ಸನ್ನಿವೇಶವೇ ಬೇರೆ ಇದೆ.
ಟ್ರಂಪ್ ಮಂಡಿಸಿದ ಶಾಂತಿ ಯೋಜನೆಯ ಹಲವು ಅಂಶಗಳನ್ನು ಹಮಾಸ್ ಒಪ್ಪಿಕೊಂಡಿದೆ ಎಂದು ತಿಳಿಸಿದರೂ, ಪ್ಯಾಲೆಸ್ತೀನಿಯರಿಗೆ ಅನುಕೂಲಕರವಾಗಿಲ್ಲ.
ಮಾಧ್ಯಮ ವರದಿಗಳ ಪ್ರಕಾರ, ಟ್ರಂಪ್ ಆದೇಶದ ನಂತರ ಗಾಜಾದಲ್ಲಿ ಬಾಂಬ್ ದಾಳಿಗಳು ಗಣನೀಯವಾಗಿ ಕಡಿಮೆಯಾಗಿವೆ. ಇತ್ತ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು, ಟ್ರಂಪ್ ಯೋಜನೆಯ ಮೊದಲ ಹಂತದ ಅನುಷ್ಠಾನಕ್ಕೆ ಇಸ್ರೇಲ್ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. ಈ ಹಂತವು ಒತ್ತೆಯಾಳುಗಳ ಬಿಡುಗಡೆಯನ್ನು ಒಳಗೊಂಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ, ವಿಶ್ವ ನಾಯಕರು ಹಮಾಸ್‌ನ ಪ್ರತಿಕ್ರಿಯೆಯನ್ನು ಶಾಂತಿಯ ದಾರಿಗೆ ಮುನ್ನಡೆಯುವ “ಸಕಾರಾತ್ಮಕ ಬೆಳವಣಿಗೆ” ಎಂದು ಶ್ಲಾಘಿಸಿದ್ದಾರೆ. ಇದು ಪ್ಯಾಲೆಸ್ತೀನ್ ಜನರ ಮೇಲಿನ ಎರಡು ವರ್ಷಗಳ ದಾಳಿಯ ಅಂತ್ಯಕ್ಕೆ ದಾರಿ ತೋರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.