ಮೈಸೂರು: ಜಗದ್ವಿಖ್ಯಾತ ಮೈಸೂರು ದಸರಾ ಹಬ್ಬದ ಉತ್ಸವದ ಪರಮೋತ್ಸವಾದ ಜಂಬೂ ಸವಾರಿ ಮೆರವಣಿಗೆ ಗಮನಸೆಳೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಯದುವೀರ್ ಒಡೆಯರ್, ವಿಧಾನದ ಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ ಉಪಸ್ಥಿತಿಯಲ್ಲಿ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.
ಸಂಜೆ 4.42ರಿಂದ 5.06ರ ಕುಂಭ ಲಗ್ನದ ಶುಭ ಮುಹೂರ್ತದಲ್ಲಿ ಚಿನ್ನದ ಅಂಬಾರಿಯಲ್ಲಿ ಕಂಗೊಳಿಸುತ್ತಿದ್ದ ನಾಡದೇವಿ ಚಾಮುಂಡೇಶ್ವರಿಗೆ ಸಿಎಂ ಪುಷ್ಪಾರ್ಚನೆ ಸಲ್ಲಿಸಿ ಮೆರವಣಿಗೆಯ ಆರಂಭ ಮಾಡಿದರು. ಸುಮಾರು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯು ಆನೆ ಲಕ್ಷಾಂತರ ಜನರ ಮುಂದೆ ಗಾಂಭೀರ್ಯದ ಹೆಜ್ಜೆ ಹಾಕುತ್ತ ಸಾಗಿದ ದೃಶ್ಯ ಎಲ್ಲರ ಮನ ಸೆಳೆಯಿತು. ಕುಮ್ಕಿ ಆನೆಗಳು ಕಾವೇರಿ, ರೂಪಾ ಕೂಡಾ ಸಾಥ್ ನೀಡಿದವು. ಅಂಬಾರಿಯ ಮೇಲಿದ್ದ ನಾಡದೇವಿಯನ್ನು ಕಂಡು ಭಕ್ತಜನರು ಪುನೀತರಾದರು.
ಅರಮಣಕ್ಕಿಯ ಬಲರಾಮ ದ್ವಾರದಿಂದ ಪ್ರಾರಂಭಗೊಂಡ ಜಂಬೂ ಸವಾರಿ, ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ಆಸ್ಪತ್ರೆ ವೃತ್ತ, ಬಂಬೂ ಬಜಾರ್ ಮಾರ್ಗವಾಗಿ ಬನ್ನಿಮಂಟಪ ತಲುಪುವವರೆಗೂ ಸುಮಾರು 5 ಕಿ.ಮೀ. ಉದ್ದದ ಮಾರ್ಗದಲ್ಲಿ ಸಾಗಿತು.