ಮಂಗಳೂರು: ಮಂಗಳೂರು ಹೊರ ವಲಯದ ಬಜಪೆ ಗ್ರಾಮದ ನೆಲ್ಲಿದಡಿಗುತ್ತಿನ ದೈವ ಕಾಂತೇರಿ ಜುಮಾದಿ ಸ್ಥಾನಕ್ಕೆ ತೆರಳಿ ನಿತ್ಯ ಆರಾಧನೆಗೆ ಮುಂದಿನ ದಿನಗಳಿಂದ ಅವಕಾಶ ನಿರಾಕರಿಸುವ ಮೂಲಕ ಮಂಗಳೂರು ಎಸ್‌ಇಝೆಡ್ ತುಳುನಾಡಿನ ನಂಬಿಕೆ ಮೇಲೆ ಸವಾರಿ ಮಾಡಲು ಹೊರಟಿರುವುದು ವಿಷಾದನೀಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಪದ್ಮರಾಜ್ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ದೈವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದ್ದು, ಇದೀಗ ದೈವಕ್ಕೆ ಹೂವು, ನೀರು ಇಡಲು ಬಿಡುವುದಿಲ್ಲ ಎನ್ನುವ ಮೂಲಕ ಎಸ್‌ಇಝೆಡ್ ಅಧಿಕಾರಿಗಳು ನೀಡಿರುವ ಆದೇಶ ತುಳುನಾಡಿದ ನಂಬಿಕೆ ಮೇಲೆ ಮಾಡಿರುವ ಅಪಮಾನ ಎಂದವರು ಕಿಡಿಕಾರಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಅನಾಹುತ ಸಂಭವಿಸುವುದನ್ನೂ ದೈವ ದೇವರು ಕಾಪಾಡಿಕೊಂಡು ಬಂದಿರುವುದು ನಮಗೆಲ್ಲ ತಿಳಿದ ವಿಷಯ. ನಾವು ಯಾವುದೇ ಅಭಿವೃದ್ಧಿಯ ವಿರೋಧಿಗಳಲ್ಲ. ಆದರೆ ಅನಾದಿಕಾಲದಿಂದಲೂ ನಂಬಿಕೊಂಡು ಬಂದಿರುವ ದೈವಸ್ಥಾನಗಳಿಗೆ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಬೇಕಿರುವುದು ಅಧಿಕಾರಿಗಳ ಧರ್ಮ. ಅಭಿವೃದ್ಧಿಯ ನೆಪದಲ್ಲಿ ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಕೂಡದು ಎಂದವರು ಮಾಧ್ಯಮ ಹೇಳಿಕೆಯಲ್ಲಿ ಪ್ರತಿಪಾಧಿಸಿದ್ದಾರೆ.
ವಿಶೇಷ ಆರ್ಥಿಕ ವಲಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಸುಸೂತ್ರವಾಗಿ ನಡೆಯುಲು ದೈವದೇವರ ಅನುಗ್ರಹವೂ ಅಷ್ಟೇ ಮುಖ್ಯ. ಆದ್ದರಿಂದ ನೆಲ್ಲಿದಡಿಗುತ್ತಿನ ದೈವ ಕಾಂತೇರಿ ಜುಮಾದಿ ಸ್ಥಾನಕ್ಕೆ ಯಾವುದೇ ತೊಂದರೆಯಾಗದಂತೆ ಅಭಿವೃದ್ಧಿ ಕಾರ್ಯ ನಡೆಸಲಿ. ಸಂಸದರು, ಜಿಲ್ಲಾಧಿಕಾರಿಗಳು, ಎಸ್‌ಇಝೆಡ್ ಅಧಿಕಾರಿಗಳು, ಸಂಬಂಧಪಟ್ಟವರು ಕೂಡಲೇ ಒಳ್ಳೆಯ ನಿರ್ಧಾರಕ್ಕೆ ಕೈಗೊಳ್ಳುವಂತೆ ಎಂದು ಪದ್ಮರಾಜ್ ಆಗ್ರಹಿಸಿದ್ದಾರೆ.