ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಹೆಚ್ಚು ಸ್ಥಾನಗಳನ್ನು ಗೆದ್ದಿದೆಯಾದರೂ ಕಳೆದ ಚುನಾವಣೆಗೆ ಹೋಲಿಸಿದರೆ ಕಮಲ ಪಾಳಯದ ಸಾಧನೆ ಕಳಪೆಯಲ್ಲದೆ ಬೇರೇನೂ ಅಲ್ಲ. ಕಾಂಗ್ರೆಸ್ ಕೂಡಾ ವಿಧಾನಸಭಾ ಚುನಾವಣಾ ಫಲಿತಾಂಶ ಮಾದರಿಯಲ್ಲೇ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಕನಸು ನನಸಾಗಿಲ್ಲ.
ಬಿಜೆಪಿಗೆ ಕಳಪೆ ಸಾಧನೆಯ ಸರ್ಟಿಫಿಕೇಟ್?
ರಾಜ್ಯದಲ್ಲಿ ಮೋದಿ ವರ್ಚಸ್ಸು ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ಲೋಹಗಳನ್ನು ಮುಂದಿಟ್ಟರೆ ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲಬಹುದೆಂದು BJP-JDS ಮೈತ್ರಿಕೂಟ ಲೆಕ್ಕಾಚಾರ ಹಾಕಿತ್ತು. ಅಷ್ಟೇ ಅಲ್ಲ, ಲಿಂಗಾಯತ ಮತಗಳನ್ನು ಸೆಳೆಯಲೆಂದೇ ಬಿಎಸ್‌ವೈ ಪುತ್ರ ವಿಜಯೇಂದ್ರ ಅವರಿಗೆ ಬಿಜೆಪಿ ಪಟ್ಟ ಕಟ್ಟಿತ್ತು. ಚುನಾವಣೆ ಘೋಷಣೆಯಾದಾಗಿನಿಂದ ತಾವು ಜೆಡಿಎಸ್ ಜೊತೆಗೂಡಿ ಎಲ್ಲಾ 28 ಕ್ಷೇತ್ರವನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಇದ್ದರು. ಕಾರ್ಯಕರ್ತರು ಕೂಡಾ ನಾಯಕರ ಮಾತುಗಳನ್ನು ನಂಬಿದ್ದರು. ಆದರೆ ನಾಯಕರ ಲೆಕ್ಕಾಚಾರವಷ್ಟೇ ಅಲ್ಲ, ಅವರ ಅಭಿಪ್ರಾಯಗಳೇ ಸತ್ಯಕ್ಕೆ ದೂರ ಎಂಬುದಾಗಿ ಕಾರ್ಯಕರ್ತರು ಈಗ ಪ್ರತಿಪಾದಿಸುತ್ತಿದ್ದಾರೆ.
ಹಿಂದೆ ರಾಜ್ಯದಲ್ಲಿ ಗದ್ದುಗೆಯಲ್ಲಿದ್ದ ಬಿಜೆಪಿ ರಾಜ್ಯದ ಜನರ ವಿಶ್ವಾಸ ಗಿಟ್ಟಿಸಿರಲಿಲ್ಲ. ಬೊಮ್ಮಾಯಿ ಸರ್ಕಾರ ಕೂಡಾ ಸಾಲು ಸಾಲು ಹಗರಣಗಳಿಗೆ ಸಾಕ್ಷಿಯಾಗಿತ್ತು. ಹೈಕಮಾಂಡ್ ಕೂಡಾ ಕುರುಡು ಜಾಣತನ ಪ್ರದರ್ಶಿಸುತ್ತಿತ್ತು. ಹಾಗಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರವನ್ನೇ ಕಳೆದುಕೊಂಡಿತು. ಇದೀಗ ಲೋಕಸಭಾ ಚುನಾವಣೆಯಲ್ಲೂ ಹಲವು ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಳ್ಳುವಂತಾಯಿತು ಎಂದು ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಕೂಡಾ ಗೆದ್ದಿಲ್ಲ..!
ಕಳೆದ ಅವಧಿಯಲ್ಲಿ ಕೇವಲ ಒಂದು ಸ್ಥಾನವನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 9 ಸ್ಥಾನಗಳನ್ನು ಜಯಿಸಿದೆ. ಆದರೆ, ಬಿಜೆಪಿ ವಿರುದ್ದದ ಅಲೆ, ಗ್ಯಾರೆಂಟಿ ಭರವಸೆಯನ್ನು ಗಣನೆಗೆ ತೆಗೆದುಕೊಂಡರೆ ಕಾಂಗ್ರೆಸ್ ಪಕ್ಷವೂ ಸಾಧಿಸಿದ್ದೇನೂ ಇಲ್ಲ. ಕನಿಷ್ಠ14 ಸ್ಥಾನಗಳನ್ನಾದರೂ ಗೆಲ್ಲುವ ಅವಕಾಶ ಇತ್ತಾದರೂ ಕೈ ನಾಯಕರೊಳಗಿನ ಮುಸುಕಿನ ಗುದ್ದಾಟದಿಂದಾಗಿ ಪಕ್ಷಕ್ಕೆ ಒಂದಂಕಿ ಮಾರ್ಕ್ಸ್ ಸಿಕ್ಕಿದೆ. ಅಷ್ಟೇ ಅಲ್ಲ, ಡಿಸಿಎಂ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಅವರ ಹೀನಾಯ ಸೋಲಿನಿಂದಾಗಿ ಕಾಂಗ್ರೆಸ್ ತೀವ್ರ ಮುಜುಗರವನ್ನೇ ಅನುಭವಿಸಿದೆ. ಜೊತೆಗೆ ಆಡಳಿತ ಪಕ್ಷವು ಕರ್ನಾಟಕದ ದಕ್ಷಿಣ ಭಾಗದಲ್ಲಿ ಕೇವಲವೆರಡೇ ಸ್ಥಾನಗಳನ್ನು ಗೆದ್ದಿರುವುದೂ ಕಳಪೆ ಸಾಧನೆಯಲ್ಲದೆ ಮತ್ತೇನು ಅಲ್ಲ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ.
ರಾಜ್ಯದಲ್ಲಿ ಅಂತಿಮ ಫಲಿತಾಂಶ ಹೀಗಿದೆ:
ಕರ್ನಾಟಕದಲ್ಲಿ ಪರಿಪೂರ್ಣ ಫಲಿತಾಂಶವನ್ನು ಚುನಾವಣಾ ಆಯೋಗ ಘೋಷಿಸಿದ್ದು, 28 ಕ್ಷೇತ್ರಗಳ ಪೈಕಿ 17 ಕಡೆ ಬಿಜೆಪಿ ಗೆದ್ದಿದೆ, 9 ಸ್ಥಾನಗಳನ್ನು ಕಾಂಗ್ರೆಸ್ ಪಡೆದರೆ, ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಭಾರಿಸಿದೆ. ಮಾಜಿ ಪ್ರಧಾನಿ ದೇವೇಗೌಡರ ತವರಿನಲ್ಲಿ ಜೆಡಿಎಸ್ ಪತನವಾಗಿರುವುದೇ ಫಲಿತಾಂಶದ ಅಚ್ಚರಿ.
ಈ ನಡುವೆ, ಈ ಬಾರಿಯೂ ಕರ್ನಾಟಕದಲ್ಲಿ 2004ರ ಫಲಿತಾಂಶವೇ ಮರುಕಳಿಸಿರುವುದು ಅಚ್ಚರಿಯ ಸಂಗತಿ. 2004ರಲ್ಲೂ ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನಗಳನ್ನು ಹಂಚಿದ್ದವು.
ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ:
- ಬಾಗಲಕೋಟೆ : ಪಿಸಿ. ಗದ್ದಿಗೌಡರ್-ಬಿಜೆಪಿ
- ಬೆಂಗಳೂರು ಕೇಂದ್ರ : ಪಿ.ಸಿ.ಮೋಹನ್- ಬಿಜೆಪಿ
- ಬೆಂಗಳೂರು ಉತ್ತರ : ಶೋಭಾ ಕರಂದ್ಲಾಜೆ- ಬಿಜೆಪಿ
- ಬೆಂಗಳೂರು ದಕ್ಷಿಣ : ತೇಜಸ್ವಿ ಸೂರ್ಯ- ಬಿಜೆಪಿ
- ಬೆಂಗಳೂರು ಗ್ರಾಮಾಂತರ: ಡಾ. ಮಂಜುನಾಥ್- ಬಿಜೆಪಿ
- ಬೆಳಗಾವಿ : ಜಗದೀಶ್ ಶೆಟ್ಟರ್- ಬಿಜೆಪಿ
- ಚಿಕ್ಕಬಳ್ಳಾಪುರ : ಕೆ.ಸುಧಾಕರ್- ಬಿಜೆಪಿ
- ಚಿತ್ರದುರ್ಗ : ಗೋವಿಂದ ಕಾರಜೋಳ- ಬಿಜೆಪಿ
- ದಕ್ಷಿಣ ಕನ್ನಡ: ಬ್ರಿಜೇಶ್ ಚೌಟಾ- ಬಿಜೆಪಿ
- ಧಾರವಾಡ : ಪ್ರಲ್ಹಾದ್ ಜೋಶಿ- ಬಿಜೆಪಿ
- ಮೈಸೂರು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್- ಬಿಜೆಪಿ
- ಹಾವೇರಿ : ಬಸವರಾಜ ಬೊಮ್ಮಾಯಿ- ಬಿಜೆಪಿ
- ಶಿವಮೊಗ್ಗ: ಬಿ.ವೈ ರಾಘವೇಂದ್ರ-ಬಿಜೆಪಿ
- ತುಮಕೂರು: ವಿ.ಸೋಮಣ್ಣ- ಬಿಜೆಪಿ
- ಉಡುಪಿ ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ- ಬಿಜೆಪಿ
- ಉತ್ತರ ಕನ್ನಡ: ವಿಶ್ವೇಶ್ವರ ಹೆಗಡೆ ಕಾಗೇರಿ- ಬಿಜೆಪಿ
- ಹಾಸನ ಕ್ಷೇತ್ರ: ಶ್ರೇಯಸ್ ಪಟೇಲ್-ಕಾಂಗ್ರೆಸ್
- ಮಂಡ್ಯ: ಹೆಚ್ಡಿ ಕುಮಾರಸ್ವಾಮಿ-ಜೆಡಿಎಸ್
- ಕೋಲಾರ : ಎಂ ಮಲ್ಲೇಶ್ ಬಾಬು- ಜೆಡಿಎಸ್
- ವಿಜಯಪುರ : ರಮೇಶ್ ಜಿಗಜಿಣಗಿ- ಬಿಜೆಪಿ
- ಬಳ್ಳಾರಿ : ಇ.ತುಕಾರಾಂ- ಕಾಂಗ್ರೆಸ್
- ಬೀದರ್ : ಸಾಗರ್ ಈಶ್ವರ ಖಂಡ್ರೆ- ಕಾಂಗ್ರೆಸ್
- ಚಾಮರಾಜನಗರ : ಸುನಿಲ್ ಬೋಸ್- ಕಾಂಗ್ರೆಸ್
- ಚಿಕ್ಕೋಡಿ : ಪ್ರಿಯಾಂಕಾ ಸತೀಶ್ ಜಾರಕಿಹೊಳಿ- ಕಾಂಗ್ರೆಸ್
- ದಾವಣಗೆರೆ: ಪ್ರಭಾ ಮಲ್ಲಿಕಾರ್ಜುನ್- ಕಾಂಗ್ರೆಸ್
- ಕಲಬುರಗಿ: ರಾಧಾಕೃಷ್ಣ-ಕಾಂಗ್ರೆಸ್
- ಕೊಪ್ಪಳ : ಕೆ. ರಾಜಶೇಖರ್ ಬಸವರಾಜ ಹಿಟ್ನಾಳ್- ಕಾಂಗ್ರೆಸ್
- ರಾಯಚೂರು: ಜಿ ಕುಮಾರ್ ನಾಯಕ್- ಕಾಂಗ್ರೆಸ್
- ಹಾಸನ ಕ್ಷೇತ್ರ: ಶ್ರೇಯಸ್ ಪಟೇಲ್-ಕಾಂಗ್ರೆಸ್






















































