ಬೆಂಗಳೂರು: ತಾಯಂದಿರು ದಾರಿ ತಪ್ಪಿದ್ದಾರೆ ಎಂದರೆ ಏನರ್ಥ? ಎಂದು ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಅವರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿ ನಡೆಸಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು. ಆದರೂ ಮಹಿಳೆಯರಿಗೆ ಗೌರವ ನೀಡುವಂತಹ ಕನಿಷ್ಠ ಜ್ಞಾನ ಅವರಿಗೆ ಇಲ್ಲವೇ? ಮಹಿಳೆಯರಿಗೆ ಗೌರವ ನೀಡಬೇಕು ಎನ್ನುವುದು ಸಂವಿಧಾನದ ಆಶಯ. ಈ ಆಶಯದ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದರು.
ತುರುವೇಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವಾಗ ಮಹಿಳೆಯರಿಗೆ ಅವಮಾನ ಆಗುವ ರೀತಿ ಮಾತನಾಡಿದ್ದಾರೆ. ‘ಹಳ್ಳಿಯ ಮಹಿಳೆಯರು ಗ್ಯಾರಂಟಿ ಯೊಜನೆಗಳಿಂದ ದಾರಿ ತಪ್ಪಿದ್ದಾರೆ. ಕೌಟುಂಬಿಕ ಜೀವನ ಏನಾಗಿದೆ ಎಂದು ನೋಡಬೇಕು’ ಎಂದು ಹೇಳಿದ್ದಾರೆ ಎಂದು ಗಮನಸೆಳೆದರು.
ತಾಯಂದಿರು ದಾರಿ ತಪ್ಪಿದ್ದಾರೆ ಎಂದರೆ ಏನರ್ಥ? ನಿಮ್ಮ ಕುಟುಂಬದಲ್ಲಿಯೂ ಸಹ ಅನೇಕ ಜನ ಹೆಣ್ಣು ಮಕ್ಕಳಿದ್ದಾರೆ. ಈ ಪದ ಬಳಕೆಯ ಮೂಲಕ ಬಿಜೆಪಿ ಸೇರಿ ಮನುವಾದಿಯಾಗಿದ್ದೀರಿ. ಇದು ಸಂವಿಧಾನಕ್ಕೆ ಮಾಡಿರುವ ಅಪಮಾನ. ಈ ಮಹಿಳಾ ವಿರೋಧಿ ಹೇಳಿಕೆಗೆ ಕೂಡಲೇ ಕ್ಷಮೆ ಕೋರಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.
ಕಷ್ಟದಲ್ಲಿ ಇರುವ ಮಹಿಳೆಯರಿಗೆ ಹಣ ಕೊಡುವುದು ತಪ್ಪೇ? ಉಚಿತವಾಗಿ ಅಕ್ಕಿ ನೀಡುವುದು ತಪ್ಪೇ? ದೇವಸ್ಥಾನ ಗಳಿಗೆ ಹೋಗುವಂತೆ ಮಾಡಿದ್ದು ತಪ್ಪೇ? ಯಾವ ರೀತಿಯಲ್ಲಿ ಮಹಿಳೆಯರು ದಾರಿ ತಪ್ಪಿದ್ದಾರೆ?. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರು ಜೆಡಿಎಸ್ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂದ ಉಗ್ರಪ್ಪ, ಚುನಾವಣಾ ಆಯೋಗ, ಮಹಿಳಾ ಆಯೋಗಕ್ಕೆ ಕುಮಾರಸ್ವಾಮಿ ಅವರ ವಿರುದ್ಧ ಮಹಿಳೆಯರಿಗೆ ಅಪಮಾನ ಮಾಡಲಾಗಿದೆ ಎಂದು ದೂರು ನೀಡಲಾಗುವುದು ಎಂದು ತಿಳಿಸಿದರು.