ತಿರುಪತಿ: ದೇಶದ ಪುಣ್ಯಕ್ಷೇತ್ರ ತಿರುಪತಿಯ ಶ್ರೀನಿವಾಸನ ಭಕ್ತರ ಬಹುಕಾಲದ ಕನಸು ನನಸಾಗುತ್ತಿದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಪತಿಯಲ್ಲಿ ವಾಸ್ತವ್ಯ ಹೂಡುವ ಕರ್ನಾಟಕದ ಭಕ್ತರಿಗೆ ಅನುಕೂಲವಾಗುವಂತಹ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಭವನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ 110 ಕೊಠಡಿಗಳಿರುವ “ಹಂಪಿ ಬ್ಲಾಕ್” ವಸತಿ ಗೃಹದ ಪೂಜಾ ಕಾರ್ಯಕ್ರಮ ಗಮನಸೆಳೆಯಿತು.
ತಿರುಪತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, ಟಿಟಿಡಿ ಸದಸ್ಯರಾದ ಎಸ್. ಆರ್. ವಿಶ್ವನಾಥ್, ಕಂದಾಯ ಇಲಾಖೆ (ಮುಜರಾಯಿ) ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ, ಮುಜರಾಯಿ ಇಲಾಖೆ ಆಯುಕ್ತರ ಬಸವರಾಜೇಂದ್ರ ಉಪಸ್ಥಿತಿಯಲ್ಲಿ ಈ ಕೈಂಕರ್ಯ ನೆರವೇರಿತು.
ಈ ಮಹತ್ವದ ಯೋಜನೆ ಕುರಿತಂತೆ ಮಾಹಿತಿ ಹಂಚಿಕೊಂಡ ಸಚಿವ ರಾಮಲಿಂಗ ರೆಡ್ಡಿ, ತಿರುಪತಿ ಭಕ್ತರ ಅಗತ್ಯಗಳನ್ನು ಪೂರೈಸುವ ಬಗ್ಗೆ ಪ್ರಯತ್ನ ಮಾಡಿದ್ದೇವೆ. ತಿರುಪತಿಯಲ್ಲಿರುವ ಕರ್ನಾಟಕ ಭವನ ಬಳಿ ಇನ್ನೂ ಹೆಚ್ಚುವರಿ 2 ಬ್ಲಾಕ್‌ನ 190 ರೂಂಗಳು ಹಾಗೂ 84 ಹಳೆಯ ಮೇಲ್ದರ್ಜೆಗೇರಿಸಿದ ರೂಂಗಳು ಹಾಗೂ 1000 ಜನ ಸಾಮರ್ಥ್ಯದ ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಜುಲೈ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ-ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕರು, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಾಗೂ ಆಂಧ್ರಪ್ರದೇಶದ ಮುಜರಾಯಿ ಮಂತ್ರಿಗಳು, ಟಿಟಿಡಿ ಅಧ್ಯಕ್ಷರು, ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆ ನೆರವೇರಲಿದೆ ಎಂದು ತಿಳಿಸಿದರು. ಹಿಂದಿನ ಸರ್ಕಾರದಲ್ಲಿ ಈ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಕಾರಣಕರ್ತರಾದ ಎಲ್ಲರನ್ನು ಆಹ್ವಾನಿಸಿ ಅಧಿಕೃತವಾಗಿ ಸಾರ್ವಜನಿಕರ ಸೇವೆಗೆ ಇವುಗಳನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ರಾಮಲಿಂಗ ರೆಡ್ಡಿ ತಿಳಿಸಿದರು.























































