ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಆರೂವರೆ ತಿಂಗಳ ಆಡಳಿತದಲ್ಲಿ ಸಾಬೀತು ಪಡಿಸಿದ್ದು ಕೇವಲ ತಾನೊಂದು ಜನವಿರೋಧಿ ಸರ್ಕಾರ ಎಂಬುದನ್ನು ಮಾತ್ರ. ಆಡಳಿತದ ಪ್ರತಿ ಹಂತದಲ್ಲಿಯೂ ಭ್ರಷ್ಟಾಚಾರ, ಅರಾಜಕತೆ ಹಾಗೂ ತುಷ್ಟೀಕರಣವನ್ನೇ ಮೂಲಮಂತ್ರವನ್ನಾಗಿಸಿಕೊಂಡಿರುವ ಎಟಿಎಂ ಸರ್ಕಾರ ರಾಜ್ಯದ ಜನತೆಯ ಹಿತವನ್ನು ಸಂಪೂರ್ಣ ಕಡೆಗಣಿಸಿ ಮಾಡುತ್ತಿರುವುದು ಜನತೆಯ ರಕ್ತ ಹೀರುವ ಕೆಲಸ ಮಾಡುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಆಕ್ರೋಶ ಹೊರಹಾಕಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಬೆಲೆಯೇರಿಕೆಯ ಮೂಲಕ ಆಡಳಿತ ಆರಂಭಿಸಿದ ಸಿಎಂ
ಸಿದ್ದರಾಮಯ್ಯ ಅವರು, ಚುನಾವಣೆಗೂ ಮುನ್ನ ಹೇಳಿದ್ದ ಸರ್ವಜನಾಂಗದ ಶಾಂತಿಯ ತೋಟ ಎಂಬುದನ್ನು ಬೊಗಳೆ ಎಂದು ಸಾಬೀತುಪಡಿಸಿ, ಈಗ “ಅಲ್ಪಸಂಖ್ಯಾತರ ಕಣ್ಣಿಗೆ ಬೆಣ್ಣೆ, ಉಳಿದವರ ಕಣ್ಣಿಗೆ ಸುಣ್ಣ” ಎಂಬ ನೀತಿ ಪಾಲಿಸುತ್ತಿರುವುದು ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ನಂಬಿಕೆ ದ್ರೋಹ.
ರಾಜ್ಯದಲ್ಲಿ ಕಂಡು ಕೇಳರಿಯದ ಬರ ಆವರಿಸಿರುವುದು ಇತಿಹಾಸದಲ್ಲಿ ಇದೇ ಮೊದಲು. ಕರ್ನಾಟಕದ 240 ತಾಲೂಕುಗಳಲ್ಲಿ 240 ತಾಲೂಕುಗಳು ಸಹ ಬರಪೀಡಿತವಾಗಿವೆ ಎಂದು ಹೇಳಿದರೆ ತಪ್ಪಾಗಲಾರದು. ಕುಡಿಯಲು ನೀರಿಲ್ಲದೆ, ದುಡಿಯಲು ಉದ್ಯೋಗವಿಲ್ಲದೆ ಜನ ಸಾಗರೋಪಾದಿಯಲ್ಲಿ ಗುಳೆ ಹೋಗುತ್ತಿದ್ದಾರೆ. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾಗಿದ್ದ “ಕೈ” ಸರ್ಕಾರ ಮಾಡುತ್ತಿರುವುದು ಬರೀ ಒಣ ರಾಜಕೀಯ ಎಂದು ಬಿಜೆಪಿ ಆರೋಪಿಸಿದೆ.
ರಾಜ್ಯದ ಬೊಕ್ಕಸವನ್ನು ಆರು ತಿಂಗಳಿನಲ್ಲಿಯೇ ದಿವಾಳಿ ಮಾಡಿರುವ ಸಿಎಂ ಸಿದ್ದರಾಮಯ್ಯರವರು, ಒಂದೆಡೆ ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ಅನುದಾನವನ್ನು ಇದೇ ಆರ್ಥಿಕ ವರ್ಷದಲ್ಲಿ ನೀಡುತ್ತೇವೆ ಎಂದು ಘೋಷಿಸುತ್ತಾರೆ, ಮತ್ತೊಂದೆಡೆ ಬರದಿಂದ ಬಸವಳಿಯುತ್ತಿರುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಜುಜುಬಿ ₹2000 ಪರಿಹಾರ ಎನ್ನುತ್ತಾರೆ. ಇದು ಕಾಂಗ್ರೆಸ್ ರಾಜ್ಯದ ರೈತರಿಗೆ ನೀಡುತ್ತಿರುವ ಅಸಲಿ ಗೌರವ. ಎಂದು ಟೀಕಾಸ್ತ್ರ ಪ್ರಯೋಗಿಸಿರುವ ಪ್ರತಿಪಕ್ಷ, ರೈತರು ತಮ್ಮ ಹಕ್ಕುಗಳಿಗಾಗಿ, ಬೊಗಸೆ ನೀರಿಗಾಗಿ, ತುತ್ತು ಅನ್ನಕ್ಕಾಗಿ ಪ್ರತಿಭಟಿಸಿದರೆ ಅವರಿಗೆ ಲಾಠಿ, ಬೂಟಿನೇಟು ನೀಡುವ ಕಾಂಗ್ರೆಸ್, ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ವೇಳೆ ಸೆರೆಸಿಕ್ಕ ಭಯೋತ್ಪಾದಕರಿಗೆ ಅಮಾಯಕರು, ಬ್ರದರ್ಸ್ ಎಂಬ ಪಟ್ಟ ಕಟ್ಟುತ್ತದೆ. ನಾಡಿಗೆ ಅನ್ನ ಕೊಡುವ ನೇಗಿಲಯೋಗಿಗಳಾದ ರೈತರಿಗಿಂತಲೂ, ದೇಶದ್ರೋಹಿ ಭಯೋತ್ಪಾದಕರ ಮೇಲೆ ಕಾಂಗ್ರೆಸ್ ಸರ್ಕಾರಕ್ಕೆ ಪ್ರೀತಿ-ಪ್ರೇಮ-ವಾತ್ಸಲ್ಯ ಹೆಚ್ಚು. ಇದೊಂದು ರೈತ ವಿರೋಧಿ ಸರ್ಕಾರ ಎಂದು ಕುಟುಕಿದೆ.
ಸಿಎಂ ಸಿದ್ದರಾಮಯ್ಯರವರು ಈ ಬಾರಿಯ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳಿಗೆ ನೀಡಿರುವ ಅನುದಾನ ಶೂನ್ಯ. ಹಿಂದುಳಿದ ವರ್ಗಗಳಿಗೆ ಚುನಾವಣೆಗೂ ಮುನ್ನ ನೀಡಿದ ಒಂದೇ ಒಂದು ಆಶ್ವಾಸನೆಯನ್ನೂ ಈಡೇರಿಸದಿರುವುದು ಹಾಗೂ ನಯಾಪೈಸೆ ಅನುದಾನ ನೀಡದಿರುವುದೇ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳಿಗೆ ನೀಡಿದ ಅಸಲಿ ಕೊಡುಗೆ. ಹಿಂದುಳಿದ ವರ್ಗಗಳ ಕಡು ವಿರೋಧಿ ಈ…
— BJP Karnataka (@BJP4Karnataka) December 13, 2023
ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇವಲ ರೈತ ವಿರೋಧಿ ಮಾತ್ರವಲ್ಲ, ಜೊತೆ ಜೊತೆಗೆ ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿರೋಧಿ ಸಹ. ಪರಿಶಿಷ್ಟ ಜಾತಿ-ಪಂಗಡಗಳ ಕಲ್ಯಾಣಕ್ಕೆ ಮೀಸಲಾಗಿದ್ದ ₹11,500 ಕೋಟಿಯನ್ನು ದುರ್ಬಳಕೆ ಮಾಡಿಕೊಂಡಿರುವುದು ಕಾಂಗ್ರೆಸ್‌ನ ಅಂತರಾಳದಲ್ಲಿ ಹುದುಗಿರುವ ದಲಿತ ವಿರೋಧಿ ಮನಸ್ಥಿತಿಯ ಪ್ರತೀಕ. ಇಂತಹ ದಲಿತ ವಿರೋಧಿ ಸರ್ಕಾರದಿಂದ ದಲಿತರ ಕಲ್ಯಾಣ ಸಾಧ್ಯವೇ..? ಎಂದು ಪ್ರಶ್ನಿಸಿರುವ ಬಿಜೆಪಿ, ಸಿಎಂ ಸಿದ್ದರಾಮಯ್ಯರವರು ಈ ಬಾರಿಯ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳಿಗೆ ನೀಡಿರುವ ಅನುದಾನ ಶೂನ್ಯ. ಹಿಂದುಳಿದ ವರ್ಗಗಳಿಗೆ ಚುನಾವಣೆಗೂ ಮುನ್ನ ನೀಡಿದ ಒಂದೇ ಒಂದು ಆಶ್ವಾಸನೆಯನ್ನೂ ಈಡೇರಿಸದಿರುವುದು ಹಾಗೂ ನಯಾಪೈಸೆ ಅನುದಾನ ನೀಡದಿರುವುದೇ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳಿಗೆ ನೀಡಿದ ಅಸಲಿ ಕೊಡುಗೆ. ಹಿಂದುಳಿದ ವರ್ಗಗಳ ಕಡು ವಿರೋಧಿ ಈ ಕಾಂಗ್ರೆಸ್ ಸರ್ಕಾರ ಎಂದು ವಿಶ್ಲೇಷಿಸಿದೆ.
ಅಭಿವೃದ್ಧಿ ಎಂಬುದನ್ನು ಮರೀಚಿಕೆಯನ್ನಾಗಿಸಿ, ಅಸಮರ್ಥ ಆಡಳಿತವನ್ನೇ ಧ್ಯೇಯವನ್ನಾಗಿಸಿಕೊಂಡಿರುವ ಜನ ವಿರೋಧಿ, ನಾಡ ವಿರೋಧಿ, ರೈತ ವಿರೋಧಿ, ದಲಿತರ ವಿರೋಧಿ, ಹಿಂದುಳಿದ ವರ್ಗಗಳ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ದರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಘೋಷಿಸಿದೆ.






















































