ನ್ಯೂಯಾರ್ಕ್ : ಮುಂಬರುವ ವರ್ಷ ನಡೆಯಲಿರುವ ಅಮೆರಿಕಾ ಅಧ್ಯಕೀಯ ಚುನಾವಣೆಗೆ ಸಿದ್ಧತೆ ನಡೆದಿರುವಾಗಲೇ ಭಾರತೀಯ ಸಂಜಾತನ ಹೆಸರು ತೀವ್ರ ಕುತೂಹಲ ಕೆರಳಿಸಿದೆ. ಭಾರತ ಮೂಲದ ಏರೋಸ್ಪೇಸ್ ಇಂಜಿನಿಯರ್ ಆಗಿರುವ ಹಿರ್ಷ್ ವರ್ಧನ್ ಸಿಂಗ್ ಅವರು 2024ರ ಅಮೆರಿಕ ಅಧ್ಯಕ್ಷೀಯ ನಾಮನಿರ್ದೇಶನಕ್ಕಾಗಿ ರಿಪಬ್ಲಿಕನ್ ರೇಸ್‌ಗೆ ಇಳಿದಿದ್ದಾರೆ. ಈ ಮೂಲಕ ಈ ವರೆಗೆ ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಖಾಡದಲ್ಲಿ ಗಮನಸೆಳೆದಿರುವ ಮೂರನೇ ಭಾರತೀಯ-ಅಮೆರಿಕನ್ ಅಭ್ಯರ್ಥಿಯಾಗಿದ್ದಾರೆ.
ಹಿರ್ಷ್ ವರ್ಧನ್ ಸಿಂಗ್ ಅವರು ತಮ್ಮ ಉಮೇದುವಾರಿಕೆಯನ್ನು ಟ್ವಿಟ್ಟರ್‌ನಲ್ಲಿನ ವೀಡಿಯೊ ಸಂದೇಶ ಮೂಲಕ ಘೋಷಿಸಿದ್ದಾರೆ. ತಮ್ಮನ್ನು ಆಜೀವ ರಿಪಬ್ಲಿಕನ್ ಮತ್ತು “ಅಮೆರಿಕಾದ ಮೊದಲ ಸಾಂವಿಧಾನಿಕ ಕ್ಯಾರಿ ಮತ್ತು ಪರ-ಜೀವನ ಸಂಪ್ರದಾಯವಾದಿ” ಎಂದು
ಹೇಳಿಕೊಂಡಿದ್ದಾರೆ.
2020ರಲ್ಲಿ ಅಮೇರಿಕ ಸೆನೆಟ್‌ಗೆ ಸ್ಪರ್ಧಿಸಿದ್ದ ಸಿಂಗ್‌ರ ಅವರದ್ದು ರಾಜಕೀಯ ಕ್ಷೇತ್ರದಲ್ಲಿನ ಸಾಹಸ ಇದೇ ಮೊದಲಲ್ಲ, ಚುನಾವಣಾ ಕಸರತ್ತಿನಲ್ಲಿ ಇದು ಅವರ ನಾಲ್ಕನೇ ಪ್ರಯತ್ನವಾಗಿದೆ. ರಕ್ಷಣಾ ಮತ್ತು ಏರೋಸ್ಪೇಸ್ ಉದ್ಯಮದಲ್ಲಿ ಅನುಭವ ಹೊಂದಿರುವ ಅವರು ಉದ್ಯಮ ದೈತ್ಯರಲ್ಲೊಬ್ಬರಾಗಿದ್ದಾರೆ.
ಟೆಕ್ ಮತ್ತು ಫಾರ್ಮಾ ಉದ್ಯಮಗಳಲ್ಲಿನ ಭ್ರಷ್ಟಾಚಾರ ಸೇರಿದಂತೆ ಅಮೆರಿಕನ್ನರು ಎದುರಿಸುತ್ತಿರುವ ಗಂಭೀರ ಸವಾಲುಗಳ ಬಗ್ಗೆ ಸಿಂಗ್ ತಮ್ಮ ವೀಡಿಯೊ ಸಂದೇಶದಲ್ಲಿ ಗಮನಸೆಳೆದಿದ್ದಾರೆ. ಅಮೆರಿಕಾದ ಕೌಟುಂಬಿಕ ಮೌಲ್ಯಗಳು, ಪೋಷಕರ ಹಕ್ಕುಗಳು ಮತ್ತು ಮುಕ್ತ ಚರ್ಚೆಯ ಸ್ವಾತಂತ್ರ್ಯದ ಮೇಲಿನ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಅಮೇರಿಕನ್ ಮೌಲ್ಯಗಳನ್ನು ಪುನಃಸ್ಥಾಪಿಸಲು ಬಲವಾದ ನಾಯಕತ್ವದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. 2024ರ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ನಾಮನಿರ್ದೇಶನವನ್ನು ಪಡೆಯುವ ಪ್ರಯತ್ನವನ್ನು ಸಿಂಗ್ ಅಧಿಕೃತವಾಗಿ ಘೋಷಿಸಿದ್ದಾರೆ.
ಭಾರತೀಯ ವಲಸಿಗ ಕುಟುಂಬದವರಾಗಿರುವ ಸಿಂಗ್, 2009 ರಲ್ಲಿ ನ್ಯೂಜೆರ್ಸಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. 2017 ರಲ್ಲಿ ಗವರ್ನರ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ನ್ಯೂಜೆರ್ಸಿ ರಾಜಕೀಯಕ್ಕೆ ಕಾಲಿಟ್ಟ ಅವರು, 9.8% ಮತ ಪಡೆದು, ಮೂರನೇ ಸ್ಥಾನ ಗಿಟ್ಟಿಸಿಕೊಂಡಿದ್ದರು.




























































