ಬೆಂಗಳೂರು: ಬಿಜೆಪಿಯ ಪ್ರಣಾಳಿಕೆ ಸಮಾಜದ ಪ್ರತಿ ವಲಯದ ಜನರ ಆಶೋತ್ತರಗಳು, ಅಭಿಲಾಷೆಗಳಂತೆ ಸಿದ್ಧವಾಗಲಿದೆ. ಕೇವಲ ಮತ ಗಳಿಕೆಯ ಉದ್ದೇಶಕ್ಕಾಗಿ ಸುಳ್ಳು, ಪೊಳ್ಳು ಭರವಸೆಗಳನ್ನು ನೀಡುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬಿಬಿಎಂಪಿ ಹೋಟೆಲ್ ಅಸೋಸಿಯೇಷನ್ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿ ಮಾತನಾಡಿದ ಸಚಿವರು, ಸಮಾಜದ ಎಲ್ಲಾ ವರ್ಗದವರನ್ನು ಭೇಟಿ ಮಾಡಿ, ಅವರ ಅಭಿಪ್ರಾಯ ಪಡೆದು ಪ್ರಣಾಳಿಕೆ ರೂಪಿಸಲಾಗುತ್ತಿದೆ. ಚುನಾವಣೆ ಬಳಿಕ ಸರ್ಕಾರ ರಚನೆ ಮಾಡಿದಾಗ ಮುಂದಿನ 5 ವರ್ಷಗಳಲ್ಲಿ ಏನೆಲ್ಲಾ ಅನುಷ್ಠಾನಕ್ಕೆ ತರಬೇಕು, ಅದು ಕಾರ್ಯಸಾಧುವೇ ಅನ್ನುವುದನ್ನು ಗಮನಿಸಿ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದರು.
ಬೇರೆ ಪಕ್ಷ 1, 2, 3 ಗ್ಯಾರೆಂಟಿ ಎಂದು ಏಜೆನ್ಸಿಯವರು ಬರೆದುಕೊಟ್ಟಿದ್ದನ್ನು ಘೋಷಿಸುತ್ತಿದೆ. ಯೋಜನೆಗಳ ಆರ್ಥಿಕ ನೆಲೆಗಟ್ಟು ನೋಡದೆ, ಅನುಷ್ಠಾನ ಸಾಧ್ಯವೇ ಇಲ್ಲವೇ ಎಂಬ ಬಗ್ಗೆ ವಿಮರ್ಶೆ ನಡೆಸದೆ ಘೋಷಣೆಗಳ ಮೇಲೆ ಘೋಷಣೆ ಮಾಡಿದೆ. ಆದರೆ ಇದು ಕೇವಲ ಮತ ಕೀಳಲು ಆಕರ್ಷಕ ಪ್ರಣಾಳಿಕೆ ಮಾಡುವ ಪ್ರಯತ್ನ. ಇದರಿಂದ ರಾಜ್ಯದ ಅಭಿವೃದ್ಧಿ ಹಾಗೂ ಆ ಭರವಸೆಗಳ ಅನುಷ್ಠಾನ ಸಾಧ್ಯವಿಲ್ಲ. ಮತ್ತೊಂದು ಪಕ್ಷ ರಾಜ್ಯದಲ್ಲಿ ಈಗಾಗಲೇ ಯಾತ್ರೆ ಮಾಡಿ ಒಂದೊಂದು ಗ್ರಾಮ ಪಂಚಾಯಿತಿಗೆ ಹೈಟೆಕ್ ಆಸ್ಪತ್ರೆ ನೀಡುವ ಭರವಸೆ ನೀಡಿದೆ. ಆದರೆ 45-46 ಹೊಸ ತಾಲೂಕುಗಳಾಗಿ ಅನೇಕ ವರ್ಷವಾಗಿದೆ. ಇಲ್ಲಿಯವರೆಗೆ ಆ ತಾಲೂಕಿಗೆ ಆಸ್ಪತ್ರೆ ಮಾಡಲು ಆಗಿಲ್ಲ. ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹೋಗಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಮಾಡಲು ಸಾಧ್ಯವೇ ಎಂಬುದನ್ನು ಯೋಚನೆ ಮಾಡದೆ ಮತ ಗಳಿಕೆಯ ತಂತ್ರ ಮಾಡುತ್ತಿದೆ ಎಂದರು.
ಬಿಜೆಪಿಯ ಪ್ರಣಾಳಿಕೆ ಸುಳ್ಳಿನ ಕಂತೆ ಅಲ್ಲ. ಹೀಗಾಗಿ ಸಮಾಜದ ಎಲ್ಲಾ ವರ್ಗದ ಜನರನ್ನು ಭೇಟಿ ಮಾಡಲಾಗುತ್ತಿದೆ. ಸೇವಾ ವಲಯದಲ್ಲಿ ಸೃಷ್ಟಿಯಾಗುವಷ್ಟು ಉದ್ಯೋಗ ಬೇರೆಲ್ಲೂ ಆಗುವುದಿಲ್ಲ. ಹೀಗಾಗಿ ಹೊಟೇಲ್ ಉದ್ಯಮಿಗಳ ಜೊತೆ ಮೊದಲ ಸಂವಾದ ನಡೆಯುತ್ತಿದೆ. ಮುಂದಿನ ದಿನ ಹೊಟೇಲ್ ಕೆಲಸಗಾರರ ಬಳಿಯೂ ಸಲಹೆ ಪಡೆಯಲಾಗುವುದು. ಎಲ್ಲಾ ತರಹದ ಶಿಕ್ಷಣ ಇರುವವರಿಗೆ ಉದ್ಯೋಗ ನೀಡುವ ಉದ್ಯಮ ಇದಾಗಿದೆ ಎಂದರು.