ಉಡುಪಿ: ಕಾರ್ಕಳದ ಸಚಿವ ವಿ. ಸುನಿಲ್ ಕುಮಾರ್ ವಿರುದ್ಧ ಹಿಂದೂ ಸಂಘಟನೆಗಳೇ ಸಿಡಿದೆದ್ದಿದ್ದು ಇದೀಗ ಭಜರಂಗದಳದ ಮಾಜಿ ಮುಖಂಡ, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಹೊಸ ಹಗರಣದ ಬಾಂಬ್ ಸಿಡಿಸಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಲೋಕಾಯುಕ್ತಕ್ಕೆ ಮುತಾಲಿಕ್ ಅವರು ದೂರು ನೀಡಿದ್ದಾರೆ ಎಂಬ ಸುದ್ದಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಲೋಕಾಯುಕ್ತಕ್ಕೆ ದೂರು..
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಅವರು ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಇದೀಗ ಅದೇ ಲೋಕಾಯುಕ್ತಕ್ಕೆ ಮುತಾಲಿಕ್ ಅವರು ದೂರು ನೀಡಿರುವ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಸುನಿಲ್ ಕುಮಾರ್ ವಿರುದ್ದ ನಕಲಿ ಹಿಂದುತ್ವ, ಭ್ರಷ್ಟಾಚಾರ ಬಗ್ಗೆ ಆರೋಪಿಸುತ್ತಲೇ ಇರುವ ಪ್ರಮೋದ್ ಮುತಾಲಿಕ್, ಇದೀಗ ಬೇನಾಮಿ ಆಸ್ತಿ ಕುರಿತಂತೆ ಕಾರ್ಕಳದ ಬಿಜೆಪಿ ನಾಯಕರ ವಿರುದ್ದ ಆರೋಪ ಮಾಡಿದ್ದಾರೆ. ಹೆಬ್ರಿ ತಾಲೂಕಿನಲ್ಲಿ ಸುಮಾರು 67 ಎಕರೆ ಕೃಷಿ ಭೂಮಿಯನ್ನು ಬೇನಾಮಿ ಹೆಸರಿನಲ್ಲಿ ಬೇರೆ ಬೇರೆ ರೈತರಿಂದ ಖರೀದಿಯಾಗಿದೆ. ಮುಂದೆ ಅದು ಕೈಗಾರಿಕಾ ಪ್ರದೇಶವಾಗಿ ಭೂ ಪರಿವರ್ತನೆ ಮಾಡಿ 4-5 ಪಟ್ಟು ಹೆಚ್ಚಿನ ಬೆಲೆಗೆ ಸರ್ಕಾರ ಖರೀದಿ ಮಾಡುತ್ತದೆ. ಕಡಿಮೆ ಬೆಲೆಗೆ ಈ ಭೂಮಿ ಖರೀದಿಸಿದ್ದು, ಇದರಿಂದ ಜಮೀನು ಹೊಂದಿದ್ದ ಬಡ ರೈತರಿಗೂ ಅನ್ಯಾಯ ಆಗಿದೆ ಎಂದು ಮುತಾಲಿಕ್ ಆರೋಪಿಸಿದ್ದಾರೆ. ಈ ಹಗರಣದಲ್ಲಿ ರಾಜ್ಯದ ಪ್ರಭಾವಿ ಮಂತ್ರಿಗಳ ಕೈವಾಡವೂ ಇದೆ ಎಂದು ಅವರು ದೂರಿದ್ದಾರೆ.