ಬೆಂಗಳೂರು: ಬಿಎಂಎಸ್ ಶಿಕ್ಷಣ ಟ್ರಸ್ಟ್ ಅಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್ಗೆ ಭಾರೀ ಮೊತ್ತದ ಕಿಕ್ ಬ್ಯಾಕ್ ಸಂದಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬಿಎಂಎಸ್ ಟ್ರಸ್ಟ್ ಪ್ರಕರಣ ಕುರಿತು ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು. ಈ ವಿಷಾರದಲ್ಲಿ ಆಡಳಿತ ಪ್ರತಿಪಕ್ಷಗಳ ನಡುವೆ ಗದ್ದಲ ಕೋಲಾಹಲ ಏರ್ಪಟ್ಟು ಸಭಾಧ್ಯಕ್ಷರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದರು. ಕಲಾಪದ ನಂತರ ವಿಧಾನಸೌಧದಲ್ಲಿರುವ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಉನ್ನತ ಶಿಕ್ಷಣ ಸಚಿವರು ದೊಡ್ಡಮಟ್ಟದ ಕಿಕ್ ಬ್ಯಾಕ್ ಪಡೆದಿದ್ದಾರೆ. ನಾನು ಸದನದಲ್ಲಿ ಈ ಮಾತು ಹೇಳಿದಾಗ ಬಿಜೆಪಿ ಪಕ್ಷದ ಯಾವ ಶಾಸಕರಾಗಲಿ, ಸಚಿವರಾಗಲಿ ವಿರೋಧ ವ್ಯಕ್ತಪಡಿಸಲಿಲ್ಲ. ಯಾಕೆಂದರೆ ಇಡೀ ಹಗರಣದಲ್ಲಿ ಏನೇನು ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದು ಜಗಜ್ಜಾಹೀರಾದ ಹಗರಣ ಎಂದು ಆರೋಪ ಮಾಡಿದರು.
ನಿನ್ನೆ ಮತ್ತು ಇಂದು ವಿಧಾನಸಭೆ ಕಲಾಪದಲ್ಲಿ ಉನ್ನತ ಶಿಕ್ಷಣ ಸಚಿವರ ಬೆಂಬಲಕ್ಕೆ ಆಡಳಿತ ಪಕ್ಷದ ಯಾರೊಬ್ಬರೂ ಬಾರದೆ ಇದ್ದಿದ್ದನ್ನು ನೋಡಿದ ಮೇಲೆ ಮಹಾಭಾರತದ ಪ್ರಸಂಗ ಒಂದು ನೆನಪಾಯಿತು. ದ್ರೌಪದಿಯ ವಸ್ತ್ರಾಪಹರಣ ಆದ ಸಂದರ್ಭದಲ್ಲಿ ಭೀಷ್ಮ, ದ್ರೋಣ ಮುಂತಾದವರೆಲ್ಲ ಮೌನಕ್ಕೆ ಶರಣಾಗಿದ್ದ ರೀತಿಯಲ್ಲಿ ಬಿಜೆಪಿಯ ಸಚಿವ, ಶಾಸಕರು ಮೌನಕೆ ಶರಣಾಗಿದ್ದರು ಎಂದು ಕುಮಾರಸ್ವಾಮಿ ಕುಟುಕಿದರು.
ಕರ್ನಾಟದಲ್ಲಿ ಮೊತ್ತ ಮೊದಲಿಗೆ ಪರ್ಸಂಟೇಜ್ ವಿಷಯ ಎತ್ತಿದವರೇ ಪ್ರಧಾನಿ ಮೋದಿ ಅವರು. ಕೆಂಪುಕೋಟೆ ಮೇಲೆ ಅಗಸ್ಟ್ 15ರಂದು ಅವರು ಮಾಡಿದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಷಣದಲ್ಲಿಯೂ ಸೇರಿದಂತೆ ಎಲ್ಲ ಕಡೆ ಕಮಿಷನ್ ಮುಕ್ತ ಭಾರತ, ಭ್ರಷ್ಟಾಚಾರ ಮುಕ್ತ ಭಾರತ ಎಂದೆಲ್ಲ ಹೇಳುತ್ತಲೇ ಇದ್ದಾರೆ. ಹಾಗಾದರೆ, ಅವರದ್ದೇ ಬಿಜೆಪಿ ಪಕ್ಷದ ಸರಕಾರ ಇರುವ ಕರ್ನಾಟಕದಲ್ಲಿ ನಡೆಯುತ್ತಿರುವುದು ಪ್ರಧಾನಿಗೆ ಗೊತ್ತಿಲ್ಲವೆ? ಎಂದೂ ಅವರು ಖಾರವಾಗಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಮುಖ್ಯ ಸಚೇತಕ ವೆಂಕಟರಾವ್ ನಾಡಗೌಡ, ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಸಾ.ರಾ.ಮಹೇಶ್, ಶಾಸಕ ಮತ್ತು ಪಕ್ಷದ ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಶಾಸಕರಾದ ಅನಿತಾ ಕುಮಾರಸ್ವಾಮಿ, ಕೆ.ಎನ್.ತಿಪ್ಪೇಸ್ವಾಮಿ ಅವರು ಸೇರಿದಂತೆ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಜರಿದ್ದರು.