ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ತ್ವರಿತಗತಿಯಲ್ಲಿ ಹರಡುತ್ತಿರುವುದನ್ನು ನಿಯಂತ್ರಿಸುವ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಕಂದಾಯ ಸಚಿವ ಆರ್.ಅಶೋಕ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಶಾಸಕರಾದ ಕೃಷ್ಣಪ್ಪ, ರವಿ ಸುಬ್ರಮಣ್ಯ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಬೇಕಾದರೆ ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲರೂ ಲಸಿಕೆ ಪಡೆಯಬೇಕು. ಈ ನಿಟ್ಟಿನಲ್ಲಿ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಕರಪತ್ರ ಸಿದ್ಧಪಡಿಸಿ ಎಲ್ಲಾ ಮನೆಗಳಿಗೆ ವಿತರಣೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಸೂಚನೆ ನೀಡಿದರು.
ವ್ಯಾಪಕ ಪ್ರಚಾರ ನೀಡುವ ಸಲುವಾಗಿ ಆಟೋ ಮುಖಾಂತರ ಪ್ರಚಾರ ಜಾಗೃತಿ, ಲಸಿಕೆ ನೀಡುವ ಸ್ಥಳಗಳ ವಿವರಣೆ, ಪ್ರತಿಯೊಬ್ಬರೂ ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ಹಾಗೂ ಎಲ್ಲಾ ವಿಭಾಗದ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿ ಕಾರ್ಯವನ್ನು ಯಶ್ವಸ್ವಿಗೊಳಿಸುವುದು. ಲಸಿಕೆ ಹಾಕುವ ಕಾರ್ಯವನ್ನು ಸ್ಥಳ ಲಭ್ಯವಿರುವ ಕಡೆ ಏರ್ಪಾಡು ಮಾಡಿ ಅಪಾಟ್೯ಮೆಂಟ್, ಕ್ಲಬ್ ಹೌಸ್, ಭಜನ ಮಂದಿರ, ಇನ್ನೂ ಸಾರ್ವಜನಿಕ ಸ್ಥಳಗಳಲ್ಲಿ ಎರ್ಪಡಿಸಿ ಲಸಿಕೆ ಗುರಿ ತಲುಪಲು ಕ್ರಮವಹಿಸುವುದು ಅವಶ್ಯಕವೆಂದರು. ಈ ಕಾರ್ಯಕ್ಕೆ ಇಂದು ದಕ್ಷಿಣ ವಲಯದ ಎಲ್ಲಾ ಖಾಸಗಿ ಆಸ್ಪತ್ರೆಯ ಮುಖ್ಯಸ್ಥರು/ಪ್ರಮುಖರು ಭಾಗವಹಿಸಿರುವುದು ಅತ್ಯಂತ ಪ್ರಾಮುಖ್ಯತೆ ಹೊಂದಿದೆ, ತಮ್ಮ ಆಸ್ಪತ್ರೆ ಯಲ್ಲಿ ಯಾವುದೇ ಸಾರ್ವಜನಿಕರು ದಾಖಲಾತಿಗೆ ಆಗಮಿಸಿದರೆ, ತಕ್ಷಣ ವೈದ್ಯೋಪಚಾರ ನೀಡುವುದು, ಅಲ್ಲದೇ ಬೆಡ್ ಇಲ್ಲವೆಂದು ಬೇರೆ ಆಸ್ಪತ್ರೆಗೆ ರೆಫರ್ ಮಾಡುವುದು ಬೇಡ, ತಕ್ಷಣ ವೈದ್ಯ ಸೇವೆ ನೀಡಿ, ತದನಂತರ ಸರ್ಕಾರದ ಬೆಡ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಸಂರ್ಪಕಿಸಿ ನಂತರ ತೀರ್ಮಾನವನ್ನು ತಿಳಿಸಿ ಎಂದು ಖಾಸಗಿ ಆಸ್ಪತ್ರೆ ಮಾಲೀಕರಿಗೆ ತಿಳಿ ಹೇಳಿದರು.
ಅಲ್ಲದೆ, ಎಲ್ಲಾ ನಾಗರಿಕರು ಲಸಿಕೆ ಪಡೆಯುವ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಈ ಬಗ್ಗೆ ಪಾಲಿಕೆ ಹೆಚ್ಚು ಗಮನವರಿಸಿ ಕಾರ್ಯನಿರ್ವಹಿಸಬೇಕು. ಎಲ್ಲರಿಗೂ ಲಸಿಕೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ನನ್ನ ವಿಧಾನ ಸಭಾ ಕ್ಷೇತ್ರದ ಕಛೇರಿಯನ್ನು ಸಹ ಲಸಿಕೆ ನೀಡುವ ಕೇಂದ್ರವನ್ನಾಗಿ ತಕ್ಷಣಕ್ಕೆ ಪರಿವರ್ತಿಸಲಾಗುವುದೆಂದರು. ಕೋವಿಡ್ ಸೋಂಕಿತರಿಗಾಗಿ ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆಯಾಗಬೇಕು. ನಗರದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸದ ಮಳಿಗೆ/ಉದ್ದಿಮೆಗಳನ್ನು ಮುಚ್ಚಲಾಗುತ್ತಿದೆ. ಅದೇ ರೀತಿ ಜನಸಾಂದ್ರತೆ ಇರುವ ಕಲ್ಯಾಣ ಮಂಟಪಗಳಲ್ಲಿಯೂ ಕೋವಿಡ್ ನಿಯಮಗಳನ್ನು ಪಾಲನೆ ಮಾಡದಿದ್ದರೆ ಕಟ್ಟು ನಿಟ್ಟಿನ ಕ್ರಮವಹಿಸಿ ಕಾಯ್ದೆ ಪ್ರಕಾರ ಅವುಗಳನ್ನು ಮುಚ್ಚಲು ಪಾಲಿಕೆಗೆ ಸೂಚನೆ ನೀಡಲಾಗುವುದೆಂದರು.
ಸಂಸದ.ತೇಜಸ್ವಿ ಸೂರ್ಯ ಮಾತನಾಡಿ, ನಗರದಲ್ಲಿ ಹಿಂದುಳಿದಿರುವ ಪ್ರದೇಶಗಳು, ಕೊಳಗೇರಿ ಪ್ರದೇಶಗಳಲ್ಲಿ ಹೆಚ್ಚು ಲಸಿಕೆ ತೆಗೆದುಕೊಳ್ಳುತ್ತಿಲ್ಲ. ಈ ಸಂಬಂಧ ಲಸಿಕೆ ಪಡೆಯುವ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು. ಆಟೋರಿಕ್ಷಾಗಳಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಬೇಕಿದೆ ಎಂದರು.
ದಕ್ಷಿಣ ವಲಯದಲ್ಲಿ 45 ವರ್ಷ ಮೇಲ್ಪಟ್ಟವರು ಸುಮಾರು 7.50 ಲಕ್ಷ ಮಂದಿಯಿದ್ದು, ಈಗಾಗಲೇ 2 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಉಳಿದವರಿಗೆ 10- 15 ದಿನಗಳಲ್ಲಿ ಲಸಿಕೆ ನೀಡುವ ಗುರಿಯಿಟ್ಟುಕೊಂಡು ಪಾಲಿಕೆ, ಖಾಸಗಿ ಆಸ್ಪತ್ರೆ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸಹಯೋಗ, ವಾಲೆಂಟಿಯರ್ಸ್ ಹಾಗೂ ಎನ್.ಜಿ.ಒ ಗಳ ಸಹಯೋಗದೊಂದಿಗೆ ಲಸಿಕೆ ನೀಡುವ ಗುರಿ ತಲುಪಲು ಮುಂದಾಗಬೇಕು. ಲಸಿಕೆ ನೀಡುವ ವಿಚಾರವಾಗಿ ಅಪಾರ್ಟ್ಮೆಂಟ್ಸ್ ಹಾಗೂ ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ನಡೆಸಿದ್ದು, ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುವವರು ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಎಲ್ಲರೂ ಲಸಿಕೆ ಪಡೆಯಬೇಕು ಎಂದು ಹೇಳಿದರು.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ,ನಗರದಲ್ಲಿ ಕೋವಿಡ್ ಬಗ್ಗೆ ನಾಗರಿಕಲ್ಲಿ ಜಾಗೃತಿ ಮೂಡಿಸಬೇಕು. ಎಲ್ಲರೂ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಪಾಲಿಕೆ ವತಿಯಿಂದ ಹೆಚ್ಚು ಹೆಚ್ಚು ಟೆಸ್ಟಿಂಗ್ ಮಾಡಲಾಗುತ್ತಿದೆ. ಇದರ ಜೊತೆಗೆ ಲಸಿಕೆ ನೀಡುವ 500 ಸೈಟ್‌ಗಳನ್ನು 1000ಕ್ಕೆ ಹೆಚ್ಚಿಸಲು ಕ್ರಮವಹಿಸುವುದು ಹಾಗೂ ಪ್ರತಿ ದಿನ 1 ಲಕ್ಷ ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.