ಬೆಂಗಳೂರು: ರಾಜ್ಯದಲ್ಲಿ 45 ಲಕ್ಷ ಜನರು ಎರಡನೇ ಡೋಸ್ ಪಡೆಯಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಎಲ್ಲರೂ ಲಸಿಕೆ ಪಡೆಯಬೇಕು. ಲಸಿಕೆ ಪಡೆಯುವ ವಿಚಾರದಲ್ಲಿ ಯಾರೂ ಉದಾಸೀನ ಮಾಡಬಾರದು. ಒಬ್ಬರಿಗೆ ಕೊರೊನಾ ಬಂದರೆ ಅದು ಇಡೀ ಕುಟುಂಬಕ್ಕೆ ಬರುವ ಸಾಧ್ಯತೆ ಇರುವುದರಿಂದ ಲಸಿಕೆ ಪಡೆಯಬೇಕು. ಮೂರನೇ ಅಲೆ ಬಂದಾಗ ಲಸಿಕೆ ಪಡೆಯದವರಿಗೆ ಸಮಸ್ಯೆಯಾಗಬಹುದು. ದೇಶದಲ್ಲಿ ಮೊದಲ ಡೋಸ್ ಸರಾಸರಿ ಶೇ.80 ಇದ್ದರೆ, ರಾಜ್ಯದಲ್ಲಿ ಶೇ.90 ಕ್ಕೂ ಅಧಿಕವಾಗಿದೆ. ಎರಡನೇ ಡೋಸ್ ನಲ್ಲಿ ದೇಶದ ಸರಾಸರಿ ಶೇ.42-43 ಇದ್ದು, ರಾಜ್ಯದಲ್ಲಿ ಶೇ.57 ಇದೆ. ಜನರು ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯಬೇಕು ಎಂದರು.
ಸೋಮವಾರ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿ ಸಲಹೆಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ನಂತರ ಚರ್ಚೆ ನಡೆಸಿ ಅಗತ್ಯ ಕ್ರಮ ವಹಿಸಲಾಗುವುದು. ಕಳೆದೆರಡು ವರ್ಷದಿಂದ ಅನೇಕ ವಿಚಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ರಾಜ್ಯ ಸರ್ಕಾರ ಕೂಡ ಕೋವಿಡ್ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದೆ. ಆದರೆ ಬೇರೆ ದೇಶಗಳಲ್ಲಿ ಹೊಸ ವೈರಾಣು ಕಂಡುಬಂದಿರುವುದರಿಂದ ಪ್ರಧಾನಿಗಳು ಸಭೆ ನಡೆಸಲಿದ್ದಾರೆ ಎಂದರು.
25 ಬಗೆಯ ರೂಪಾಂತರಿ..?
ಕೋವಿಡ್ ವೈರಸ್ 25 ಬಗೆಯ ರೂಪಾಂತರಿಗಳನ್ನು ಹೊಂದಿದೆ ಎಂದು ತಜ್ಞರೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ. ಈಗ ಕಂಡುಬಂದಿರುವ ಹೊಸ ವೈರಾಣು ಬಗ್ಗೆಯೂ ಅಧ್ಯಯನಗಳಾಗುತ್ತಿದೆ. ಹೊಸ ವೈರಾಣುವಿನ ಮೇಲೆ ಈಗಿನ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದರ ಬಗ್ಗೆಯೂ ಅಧ್ಯಯನಗಳು ನಡೆಯಬೇಕಿದೆ. ಆದರೂ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕಿದೆ. ಜೊತೆಗೆ ಸುರಕ್ಷತಾ ನಿಯಮ ಪಾಲಿಸಬೇಕಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ವೈರಾಣುಗೆ ಓಮಿಕ್ರಾನ್ ಎಂಬ ಹೆಸರು ನೀಡಿದ್ದಾರೆ. ಇದು ಎಷ್ಟು ತೀವ್ರತೆ ಹೊಂದಿದೆ ಎಂಬ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ ಎಂದರು.
ಔಷಧಿ ಖರೀದಿ ಕುರಿತು ಸಭೆ ನಡೆಸಲಾಗಿದೆ. ಔಷಧಿಗಾಗಿ ಸುಮಾರು 38 ಕೋಟಿ ರೂ. ಅನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನೀಡಲಾಗಿದೆ. ಕೋವಿಡ್ ನಿಂದಾಗಿ ಜನರಲ್ ಔಷಧಿಗಳನ್ನು ಖರೀದಿಸುವುದು ಈ ವರ್ಷ ಸ್ವಲ್ಪ ವಿಳಂಬವಾಗಿದೆ. ಕೋರ್ಟ್ ನಲ್ಲೂ ಪ್ರಕರಣ ಇದ್ದಿದ್ದರಿಂದ ಕೆಲ ಟೆಂಡರ್ ಗಳೂ ಆಗಿರಲಿಲ್ಲ. ಸ್ಥಳೀಯವಾಗಿಯೇ ಔಷಧಿ ಖರೀದಿಸಲು ಹಣ ನೀಡಲಾಗಿದೆ. ತಾಲೂಕು, ಜಿಲ್ಲಾಸ್ಪತ್ರೆ ಎಲ್ಲ ಆಸ್ಪತ್ರೆಗಳಲ್ಲಿ ಎರಡು ಮೂರು ದಿನಗಳಲ್ಲಿ ಔಷಧಿ ದೊರೆಯಲಿದೆ. ಯಾವುದೇ ಕೊರತೆ ಆಗದಂತೆ ಕ್ರಮ ವಹಿಸಲಾಗಿದೆ ಎಂದರು.