ಉಡುಪಿ: ಬಿಜೆಪಿಯಲ್ಲಿ ಲಿಂಗಾಯತರನ್ನು ಕಡೆಗಣಿಸಿದ ಕಾರಣದಿಂದಾಗಿಯೇ ಶೆಟ್ಟರ್, ಸವದಿ ಸಹಿತ ಅನೇಕ ನಾಯಕರು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೈಂದೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಬಿಜೆಪಿಯ ಆಣೆಕಟ್ಟು ಹೊಡೆದಿದೆ ಎಂದು ನಾನು ಹೇಳಿರುವುದಕ್ಕೆ, ಬೊಮ್ಮಾಯಿ ಅವರು ಕಾಂಗ್ರೆಸ್ ಬಾವಿಯಲ್ಲಿ ನೀರೇ ಇಲ್ಲ ಎಂದಿದ್ದಾರೆ. ಜಗದೀಶ್ ಶೆಟ್ಟರ್ ಅವರು ಪಕ್ಷದ ಅಧ್ಯಕ್ಷರು, ಸ್ಪೀಕರ್ ಹಾಗೂ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು. ಅವರನ್ನು ಕಡೆಗಣಿಸಿದ ಪರಿಣಾಮ ಅವರು, ಲಕ್ಷ್ಮಣ ಸವದಿ, ಪುಟ್ಟಣ್ಮ, ಬಾಬುರಾವ್ ಚಿಂಚನಸೂರು ಸೇರಿದಂತೆ ಅನೇಕ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇವರೆಲ್ಲರೂ ದಡ್ಡರೇ? ಇವರು ಪ್ರಜ್ಞಾವಂತರಲ್ಲವೇ? ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡಿದ್ದು, ಪಕ್ಷದಲ್ಲಿ ದುಡಿದವರಿಗೆ ಬೆಲೆ ಇಲ್ಲ ಎಂದು ಅರಿತು ಕಾಂಗ್ರೆಸ್ ಸೇರುತ್ತಿದ್ದಾರೆ. ನಾವು ಅವರನ್ನು ಹೃದಯ ಶ್ರೀಮಂತಿಕೆಯಿಂದ ಸ್ವಾಗತಿಸಬೇಕು ಎಂದರು.
ಮನೆಯಲ್ಲಿ ಹಿರಿಯರಿಗೆ ವಯ್ಯಸಾಗಿದೆ ಎಂದು ಎವರನ್ನು ಮನೆಯಿಂದ ಹೊರಹಾಕಲು ಸಾಧ್ಯವಿಲ್ಲ. ಯಾರಿಗೆ ಎಷ್ಟು ಗೌರವ ನೀಡಬೇಕೋ ಅಷ್ಟು ಗೌರವ ನೀಡಲೇಬೇಕು. ಪಕ್ಷಕ್ಕೆ ದುಡಿದವರನ್ನು ಪ್ರೀತಿಸಿ ಗೌರವಿಸಬೇಕು. ನಾವು ಆ ಕೆಲಸ ಮಾಡೋಣ ಎಂದ ಡಿಕೆಶಿ, ಗೋಪಾಲ ಪೂಜಾರಿ ಅವರು ಇಲ್ಲಿ ಅಭ್ಯರ್ಥಿಯಾಗಿದ್ದಾರೆ. ಅನೇಕರಿಗೆ ಅರ್ಜಿ ಹಾಕಲು ಇಚ್ಛೆ ಇತ್ತು. ಬಹಳ ಸಜ್ಜನಿಕೆ ನಾಯಕ, ಸಣ್ಣ ಕಪ್ಪು ಚುಕ್ಕೆ ನಮ್ಮ ಪೂಜಾರಿ ಅವರ ಮೇಲೆ ಇಲ್ಲ. ಅವರೇ ಈ ಬಾರಿ ಪಕ್ಷದಿಂದ ಸ್ಪರ್ಧಿಸಬೇಕು ಎಂದು ನಾಯಕರು ತಿಳಿಸಿದರು. ಅಧಿಕಾರ ನಶ್ವರ, ಸಾಧನೆ ಅಜರಾಮರ, ಮತದಾರನೇ ಈಶ್ವರ. ಅದೇ ರೀತಿ ಗೋಪಾಲ ಪೂಜಾರಿ ಅವರು ಅಧಿಕಾರ ಇರಲಿ, ಇಲ್ಲದಿರಲಿ ಜನರಿಗಾಗಿ ದುಡಿಯುತ್ತಿದ್ದಾರೆ ಎಂದರು.
ಇಲ್ಲಿ ಬಿಜೆಪಿಯ ಮೂವರು ನಾಯಕರು ತಮ್ಮ ವಿರುದ್ಧ ಯಾವುದೇ ಸಿಡಿ ಬರಬಾರದು ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂಬ ವಿಚಾರ ನಮ್ಮ ಜಿಲ್ಲಾಧ್ಯಕ್ಷರು ತಿಳಿಸಿದರು. ಇಂತಹ ಪರಿಸ್ಥಿತಿ ಬಂದಿರುವುದೇಕೆ? ಬಿಜೆಪಿ ಇತಿಹಾಸ ಚರಿತ್ರೆ ದೊಡ್ಡದಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಮೂವರು ತಡೆಯಾಜ್ಞೆ ತಂದಿದ್ದಾರೆ. ಹಿಂದೆ ಬಾಂಬೆ ಬಾಯ್ಸ್ 6-7 ಮಂದಿ ತಡೆಯಾಜ್ಞೆ ತಂದಿದ್ದು ಕೇಳಿದ್ದೆ. ಪರಿಶುದ್ಧರು ಎಂದು ಹೇಳಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ನಾಯಕರು ಇಂದು ಕೋರ್ಟ್ ಮೊರೆ ಹೋಗಿದ್ದರೆ, ಬಿಜೆಪಿಯಲ್ಲಿ ಎಂತಹ ಹುಳುಕಿದೆ ಎಂದು ನೀವೆಲ್ಲರೂ ಆಲೋಚಿಸಬೇಕು ಎಂದು ಡಿಕೆಶಿ ಹೇಳಿದರು.
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗಗಳು ಅಧಿಕಾರಕ್ಕೆ ಬಂದಂತೆ. ಕೃಷ್ಣ ಅವರ ಕಾಲದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಕಾರ್ಯಕ್ರಮ, ಮಹಿಳೆಯರಿಗೆ ಸ್ತ್ರೀ ಶಕ್ತಿ ಕಾರ್ಯಕ್ರಮ, ಆಹಾರ ಭದ್ರತಾ ಕಾಯ್ದೆ, ಶಿಕ್,ಣ ಹಕ್ಕು, ಉದ್ಯೋಗ ಖಾತ್ರಿ ಯೋಜನೆ ಜಾರಿ ತಂದಿತು. ಬಿಜೆಪಿ ಸರ್ಕಾರ ಈ ಜನರ ರಕ್ಷಣೆಗೆ ಯಾವುದಾದರೂ ಒಂದು ಕಾನೂನು ತಂದರಾ? ಇಂದಿರಾ ಗಾಂಧಿ ಅವರ ಕಾಲದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ, ಭೂಸುಧಾರಣಾ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಪಿಂಚಣಿ ವ್ಯವಸ್ಥೆ, ಆಶಾಕಾರ್ಯಕರ್ತೆಯರ ವ್ಯವಸ್ಥೆ ತರಲಾಯಿತು ಎಂದ ಡಿಕೆಶಿ, ಬಿಜೆಪಿ ಸರ್ಕಾರ ಜನ್ ಧನ್ ಎಂದು ಖಾತೆ ತೆರೆಸಿದರು. ಉಜ್ವಲ ಯೋಜನೆ ಹೆಸರಲ್ಲಿ ಪೆಟ್ರೋಲ್ ಬಂಕ್ ಗಳಲ್ಲಿ ಮೋದಿ ಅವರು ಮಹಿಳೆಯ ಫೋಟೋ ಜತೆ ತಮ್ಮ ಫೋಟೋ ಹಾಕಿಕೊಂಡು ಪ್ರಧಾನಿ ಪ್ರಚಾರ ಪಡೆದರು. 2014ರ ಲೋಕಸಭೆ ಚುನಾವಣೆ ಸಮಯದಲ್ಲಿ ಮೋದಿ ಅವರು ಅಡುಗೆ ಅನಿಲ ಬೆಲೆ ಏರಿಕೆಯಾಗುತ್ತಿದೆ ನೀವು ಮತದಾನ ಮಾಡುವ ಮುನ್ನ ಅಡುಗೆ ಅನಿಲದ ಸಿಲಿಂಡರ್ ಗೆ ನಮಸ್ಕರಿಸಿ ಹೋಗಿ ಮತ ಹಾಕಿ ಎಂದು ಹೇಳಿದ್ದರು. 410 ರೂ. ಇದ್ದ ಸಿಲಿಂಡರ್ ಬೆಲೆ 1100 ರೂ. ಮಾಡಿದ್ದಾರೆ. ಆಮೂಲಕ ದಿನ ನಿತ್ಯ ಪಿಕ್ ಪಾಕೆಟ್ ಆಗುತ್ತಿದೆ. ಹೀಗಾಗಿ ಅದೇ ರೀತಿ ನೀವುಗಳು ಬೂತ್ ಗಳ ಮುಂದೆ ಅಡುಗೆ ಸಿಲಿಂಡರ್ ಇಟ್ಟು ಹೂವಿನ ಹಾರ ಹಾಕಿ ಜನರಿಗೆ ಹೋಗಿ ಮತ ಹಾಕಲು ಹೇಳಿ ಎಂದರು.
ಬಿಜೆಪಿ ಆಡಳಿತದಲ್ಲಿ ಗೃಹಬಳಕೆ ವಸ್ತುಗಳಿಂದ, ಇಂಧನ ಬೆಲೆಗಳು ಗಗನಕ್ಕೇರಿದೆ. ಈ ಬೆಲೆ ಏರಿಕೆಯಿಂದ ಜನರು ಕಂಗೆಟ್ಟಿದ್ದಾರೆ. ಇನ್ನು ಸರ್ಕಾರದ ಭ್ರಷ್ಟಾಚಾರಕ್ಕೆ ಬಿಜೆಪಿ ಕಾರ್ಯಕರ್ತ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಕಾರಣವಾಯಿತು. ಈ ಸರ್ಕಾರ ಕರ್ನಾಟಕವನ್ನು ದೇಶದ ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದರು. ಬೊಮ್ಮಾಯಿ ಅವರು ನಮಗೆ ಸಾಕ್ಷಿ ಕೊಡಿ ಎಂದು ಕೇಳಿದರು. ಅವರಿಗೆ ಯತ್ನಾಳ್, ಗೂಳಿಹಟ್ಟಿ ಶೇಖರ್, ವಿಶ್ವನಾಥ್, ಮಾಡಾಳ್ ವಿರೂಪಾಕ್ಷಪ್ಪ ಅವರ ಮೇನೆ ಮೇಲೆ ದಾಳಿ ಮಾಡಿ ಲೋಕಾಯುಕ್ತ ಸರ್ಕಾರಕ್ಕೆ ಸಾಕ್ಷಿ ನೀಡಿದೆ ಎಂದ ಡಿಕೆಶಿ, ಇದರ ಪರಿಣಾಮವಾಗಿ ಮೊದಲು ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದಿದ್ದ ಅಮಿತ್ ಶಾ ಅವರು, ಇವರ ಭ್ರಷ್ಟಾಚಾರಕ್ಕೆ ಜನ ಮತ ಹಾಕುವುದಿಲ್ಲ ಎಂದು ಅರಿತು ಮೋದಿ ಮುಖ ನೋಡಿ ಮತ ಹಾಕಿ ಎಂದರು.





















































