ಮೈಸೂರು: ಕಬ್ಬುದರ ನಿಗದಿಗೆ ಒತ್ತಾಯಿಸಿ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮೈಸೂರು ಎಪಿಎಂಸಿ ವೃತ್ತದ ಬಳಿ ಕಬ್ಬು ಬೆಳೆಗಾರ ರೈತರಿಂದ ಎರಡು ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದರು. ಉರುಳು ಸೇವೆ ಮೂಲಕ ಸರ್ಕಾರದ ನಿರ್ಲಕ್ಷ್ಯ ವಿರುದ್ದ ಆಕ್ರೋಶ ಹೊರಹಾಕಿದರು.
ಕಬ್ಬಿಗೆ ಹೆಚ್ಚುವರಿ ದರ ನಿಗದಿಗೆ ರಾಜ್ಯ ಸರ್ಕಾರದ ವಿಳಂಬ ನೀತಿ ಖಂಡಿಸಿ ನೂರಾರು ಕಬ್ಬು ಬೆಳೆಗಾರ ರೈತರು ಇಂದು ರಸ್ತೆ ಬಂದ್ ಚಳುವಳಿ ನಡೆಸಿ ಉರುಳು ಸೇವೆ ಮಾಡಿದರು, ಬೇಕೇ ಬೇಕು ನ್ಯಾಯ ಬೇಕು ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಸರ್ಕಾರ ಹಾಗೂ, ಜಿಲ್ಲಾ ಮಂತ್ರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು, ರೈತರ ಮರೆತಿರುವ ಎಂಎಲ್ಎ ಗಳಿಗೆ ಧಿಕ್ಕಾರ ಎಂದು ಕೂಗುತ್ತಾ ರಸ್ತೆ ತಡೆ ನಡೆಸಿದರು.
ನಾಲ್ಕು ದಿಕ್ಕುಗಳಿಂದ ಬರುತ್ತಿದ್ದ ವಾಹನಗಳನ್ನು ತಡೆದು ಉರುಳು ಸೇವೆ ನಡೆಸುತ್ತಿದ್ದಾಗ ರೈತರು ಎಲ್ಲ ರಸ್ತೆಗಳನ್ನು ಬಂದ್ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್, ಸರ್ಕಾರಗಳು ಸುಳ್ಳು ಹೇಳಿ ರೈತರನ್ನ ಮರಳು ಮಾಡುವುದು ನಿರಂತರವಾಗಿ ಮುಂದುವರಿಯುತ್ತಿದೆ, ರೈತರ ಓಟಿನಿಂದ ಗೆದ್ದ ಎಂಎಲ್ಎಗಳು ಮಂತ್ರಿಗಳು, ಸಕ್ಕರೆ ಕಾರ್ಖಾನೆಯ ಮಾಲೀಕರ ಕೈಗಾರಿಕೋದ್ಯಮಿಗಳ, ಶಿಕ್ಷಣ ಸಂಸ್ಥೆಯ, ಭೂ ಮಾಫಿಯಾ, ಮಧ್ಯದ ಮಾರಾಟಗಾರ ಮಾಲೀಕರ ಪರವಾಗಿ ಮಾತ್ರ ಮಾತನಾಡುತ್ತಾರೆ, ರೈತರ ಪರವಾಗಿ ಯಾರೂ ಮಾತನಾಡುತ್ತಿಲ್ಲ ಎಂದು ದೂರಿದರು.
ರೈತರು ನಾಲ್ಕು ತಿಂಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಮೌನವಾಗಿರುವುದು ಬೆಕ್ಕಿಗೆ ಚೆಲ್ಲಾಟ ಇಲಿಗೆ ಸಂಕಟ ಎನ್ನುವಂತಾಗಿದೆ
ರಾಜ್ಯದಲ್ಲಿ 30 ಲಕ್ಷ ಕಬ್ಬು ಬೆಳೆಗಾರರ ಹಿತರಕ್ಷಣೆ ಕಾಣಿಸುತ್ತಿಲ್ಲವಾಗಿದೆ, ಮುಂದೆ ಚುನಾವಣೆ ಬರುತ್ತಿದೆ ರಾಜ್ಯದ 38 ಸಕ್ಕರೆ ಕಾರ್ಖಾನೆ ಮಾಲಿಕತ್ವದ ಎಂಎಲ್ಎ ಎಂಪಿ ಮಂತ್ರಿಗಳನ್ನು ಸೋಲಿಸಿ ಮನೆಗೆ ಕಳಿಸಿದರೆ ಕಬ್ಬು ಬೆಳೆಗಾರರಿಗೆ ನ್ಯಾಯ ಸಿಗುತ್ತದೆ ಈ ಬಗ್ಗೆ ರಾಜ್ಯದ ರೈತರು ಚಿಂತನೆ ನಡೆಸಬೇಕು, ಇಂದು ರಾಜ್ಯದ ಬೆಳಗಾವಿ ದಾವಣಗೆರೆ, ಧಾರವಾಡ ಕಲಘಟಗಿ, ಹಳಿಯಾಳ, ಮೈಸೂರು ಬಳ್ಳಾರಿ ಹಡಗಲಿ, ಗುಲ್ಬರ್ಗ ಅಫ್ಜಲ್ಪುರ, ಬಿಜಾಪುರ ಬಾಗಲಕೋಟೆ ,ಗದಗ್ ಮುಂಡರಗಿ, ಯಲಹಂಕ ರಾಜಾನುಕುಂಟೆ, ಚಾಮರಾಜನಗರ, ಹಾಸನ ಬೀದರ್, ಚನ್ನರಾಯಪಟ್ಟಣ, ಕೊಪ್ಪಳ, ರಾಜ್ಯ ಹೆದ್ದಾರಿ ಜಿಲ್ಲೆಗಳಿಂದ ಚಳುವಳಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೇವೆ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ 31ರಂದು ಆಯಾ ಜಿಲ್ಲೆಯ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆಯಾಕಿ ನ್ಯಾಯ ಸಿಗುವ ತನಕ ನಿರಂತರ ಹೋರಾಟ ನಡೆಸಲಾಗುವುದು ಎಂದರು
ಪಂಜಾಬ್ ರಾಜ್ಯದಲ್ಲಿ 3800 ಉತ್ತರ ಪ್ರದೇಶದಲ್ಲಿ 3500 ಗುಜರಾತ್ ನಲ್ಲಿ 4400 ದರ ನಿಗದಿ ಮಾಡಿದ್ದಾರೆ ಎಂಬುದು ರಾಜ್ಯ ಸರ್ಕಾರಕ್ಕೆ ತಿಳಿದ ವಿಚಾರವೇ ಆಗಿದೆ ಇದನ್ನು ಗಮನಿಸಿ ಎಫ್ ಆರ್ ಪಿ ಬೆಲೆಯನ್ನ ಕನಿಷ್ಠ ಇಳುವರಿಗೆ ಟನ್ಗೆ 3500 ರೂ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
























































