ಬೆಂಗಳೂರು: ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ನೇತೃತ್ವದಲ್ಲಿ ಶುಕ್ರವಾರ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆ ನಡೆದಿದೆ. ಚುನಾವಣಾ ಪೂರ್ವ ತಯಾರಿ, ಸಂಘಟನಾ ಕಾರ್ಯದ ಚರ್ಚೆ ಆಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಬೇಕೆಂಬ ಗುರಿಯೊಂದಿಗೆ ಕಾರ್ಯಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲು ಮಾರ್ಗದರ್ಶನ ಮಾಡಿದ್ದಾರೆ ಎಂದು ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಂಘಟನೆ ವಿಸ್ತರಿಸುವುದು, ಪೇಜ್ ಕಮಿಟಿಗಳನ್ನು ರಚಿಸಲು ತಿಳಿಸಿದ್ದಾರೆ ಎಂದ ಅವರು ಅವಧಿಪೂರ್ವ ಚುನಾವಣೆ ಕುರಿತು ಯಾವುದೇ ಚರ್ಚೆ ಆಗಿಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಅನ್ಯ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಬರುವವರ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದರು.
ನಾಯಕತ್ವ ಮತ್ತು ಸಚಿವ ಸಂಪುಟದ ಕುರಿತು ಚರ್ಚೆ ನಡೆದಿಲ್ಲ ಎಂದ ಅವರು, ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಅವರು ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿ ಆ ಕುರಿತು ನಿರ್ಧರಿಸಲಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು. ಮುಂದಿನ ವರ್ಷ ನಡೆಯುವ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದ್ದಾಗಿ ಹೇಳಿದರು.
150ಕ್ಕೆ ತಲುಪಲು ಮಾನದಂಡಗಳ ಮಾರ್ಗದರ್ಶನ: ಸಿ.ಟಿ.ರವಿ
ಪಕ್ಷವು ಕಳೆದ ಚುನಾವಣೆಯಲ್ಲಿ 104 ಸ್ಥಾನ ಪಡೆದಿತ್ತು. ಈಗ ಒಟ್ಟು 120 ಸ್ಥಾನ ಇವೆ. ಅದನ್ನು 150ಕ್ಕೆ ಹೆಚ್ಚಿಸಲು ಅನುಸರಿಸಬೇಕಾದ ಮಾನದಂಡದ ಕುರಿತು ಅಮಿತ್ ಶಾ ಅವರು ಮಾರ್ಗದರ್ಶನ ನೀಡಿದ್ದಾರೆ. ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ ಅವರು ಪತ್ರಕರ್ತರಿಗೆ ತಿಳಿಸಿದರು. ಅವರ ಮಾರ್ಗದರ್ಶನದಂತೆ ರೋಡ್ ಮ್ಯಾಪ್ ಸಿದ್ಧಪಡಿಸಿ ಪಕ್ಷದ ಗೆಲುವಿಗೆ ಶ್ರಮಿಸುತ್ತೇವೆ ಎಂದರು.
ನಮ್ಮ ಪಕ್ಷಕ್ಕೆ ಶಕ್ತಿ ಇರುವವರು, ಸಮಾಜದ ಬಗ್ಗೆ ಕಳಕಳಿ ಇರುವವರು ಎಲ್ಲೆಲ್ಲಿಂದ- ಯಾರ್ಯಾರು ಬರುತ್ತಾರೋ ಅವರನ್ನು ಗುರುತಿಸಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದ ಅವರು, ಪ್ರಸ್ತುತ ರಾಜಕೀಯದ ಚರ್ಚೆ ನಡೆದಿದೆ. ವಿಶ್ವಾಸದ ವಾತಾವರಣದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದು ಪ್ರಶ್ನೆಗೆ ಉತ್ತರಿಸಿದರು. 5 ರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ದೇಶದಲ್ಲಿ ಬಿಜೆಪಿ ಪರವಾದ ವಾತಾವರಣ ಉಂಟಾಗಿದೆ. ಕಾಂಗ್ರೆಸ್‍ನವರು ಕಂಗಾಲಾಗಿದ್ದಾರೆ. ಬಿಜೆಪಿ 150 ಸ್ಥಾನ ಗೆಲ್ಲಲು ಅಗತ್ಯವಾದ ಗ್ರೌಂಡ್‍ವರ್ಕ್ ಮತ್ತು ರೋಡ್ ಮ್ಯಾಪ್ ಅನ್ನು ತಯಾರಿಸಲಿದ್ದೇವೆ ಎಂದರು.
ಪಕ್ಷ ಸೇರುವ ಬೇರೆ ಪಕ್ಷದವರ ಬಗ್ಗೆ ರಾಜ್ಯ ಅಧ್ಯಕ್ಷರು ಒಂದು ಸಮಿತಿ ರಚಿಸಿ ನಿರ್ಧರಿಸಲಿದ್ದಾರೆ. ಕಾಂಗ್ರೆಸ್ ಮತ್ತು ಇತರ ಪಕ್ಷದ ಹತಾಶ ವ್ಯಕ್ತಿಗಳು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಆ ಕುರಿತು ಪರಿಶೀಲಿಸಲಾಗುತ್ತದೆ ಎಂದು ಅವರು ನುಡಿದರು. ಅವಧಿಪೂರ್ವ ಚುನಾವಣೆ ಕುರಿತು ಚರ್ಚಿಸಿಲ್ಲ; 2023ರ ಏಪ್ರಿಲ್‍ನಲ್ಲಿ ಚುನಾವಣೆ ನಡೆಯಲಿದೆ ಎಂದೂ ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.