ಬೆಂಗಳೂರು: ರಾಜ್ಯದ ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೃದಯಾಘಾತದಿಂದ ಹಠಾತ್ ಸಾವುಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಸಾವನ್ನು “ಅಧಿಸೂಚಿತ ಕಾಯಿಲೆ” ಎಂದು ಘೋಷಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಹಠಾತ್ ಸಾವುಗಳ ಪರಿಶೀಲನೆಗಾಗಿ ಮರಣೋತ್ತರ ಪರೀಕ್ಷೆ ಕಡ್ಡಾಯಗೊಳಿಸಲಾಗುವುದು. ಇದೇ ವೇಳೆ, 15 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡುವ ಪ್ರಕ್ರಿಯೆ ನಡೆಯಲಿದೆ,” ಎಂದರು.
ಇತ್ತೀಚೆಗೆ ಒಂದೇ ದಿನದೊಳಗೆ ಹಲವಾರು ಕಡೆಗಳಲ್ಲಿ ನಡೆದ ಹೃದಯಾಘಾತದ ಸಾವುಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿರುವ ಬೆನ್ನಲ್ಲೇ ಸರ್ಕಾರ ಈ ತುರ್ತು ಕ್ರಮ ಕೈಗೊಂಡಿದೆ.
“ಹಠಾತ್ ಸಾವುಗಳು ಸಂಭವಿಸಿದ ತಕ್ಷಣವೇ ಸಂಬಂಧಿತ ಪ್ರಾಧಿಕಾರಗಳು ಸರ್ಕಾರಕ್ಕೆ ಮಾಹಿತಿ ನೀಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ನಿರ್ವಹಣಾ ತಂತ್ರ ರೂಪಿಸುವುದು ಸುಲಭವಾಗುತ್ತದೆ,” ಎಂದು ಗುಂಡೂರಾವ್ ವಿವರಿಸಿದರು.