ಬೆಂಗಳೂರು : ಶಿವಮೊಗ್ಗದಲ್ಲಿ ನಡೆದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಗೆ ಮುಸ್ಲಿಂ ಗೂಂಡಾಗಳೇ ಕಾರಣಕರ್ತರು ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
ಈಶ್ವರಪ್ಪ ಅವರ ಹೇಳಿಕೆಯನ್ನು ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ. ಈಗಾಗಲೇ ಧ್ವಜ ಕುರಿತ ಹೇಳಿಕೆಯಿಂದ ವಿವಾದಕ್ಕೊಳಗಾಗಿರುವ ಈಶ್ವರಪ್ಪ ಅವರು ಇದೀಗ ಶಿವಮೊಗ್ಗ ಘಟನೆ ಕುರಿತು ನೀಡಿರುವ ಹೇಳಿಕೆ ಕೂಡಾ ಬಿಜೆಪಿಗೆ ಮುಜುಗರದ ಸನ್ನಿವೇಶ ಸೃಷ್ಟಿಸಿದೆ.
ಈ ನಡುವೆ, ಈಶ್ವರಪ್ಪ ಹೇಳಿಕೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಮರ್ಥಿಸಿಕೊಳ್ಳಲು ನಿರಾಕರಿಸಿದ್ದಾರೆ. ಈಶ್ವರಪ್ಪ ಅವರು ಹೇಳಿದ ಮಾತ್ರಕ್ಕೆ ನಾನೂ ಹೇಳಬೇಕು ಅಂತಿಲ್ಲ, ತನಿಖೆ ನಡೆದ ಬಳಿಕ ಎಲ್ಲವೂ ಹೊರಗೆ ಬರಲಿದೆ ಎಂದು ಸಿಎಂ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಹರ್ಷಾ ಹತ್ಯೆ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಹರ್ಷಾ ಹತ್ಯೆ ನಂತರ ಶಿವಮೊಗ್ಗದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ತಡೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದವರು ತಿಳಿಸಿದ್ದಾರೆ.