ಬೆಂಗಳೂರು: ರಾಜ್ಯ ಸರಕಾರ ಮತ್ತು ಅದರ ವ್ಯವಹಾರವು ರೈತವಿರೋಧಿ ಎಂದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕÀ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಜಯೇಂದ್ರ, ಏಳು ತಿಂಗಳಿನಿಂದ ಅಧಿಕಾರ ನಡೆಸುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರದ ನಡೆಯು ದಿನೇದಿನೇ ಸ್ಪಷ್ಟವಾಗುತ್ತಿದೆ. ರಾಜ್ಯದಲ್ಲಿ ಭೀಕರ ಬರಗಾಲವಿದೆ. ರೈತರು ಸಂಕಷ್ಟದಲ್ಲಿದ್ದಾರೆ. 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ನಡುವೆ ರಾಜ್ಯ ಸರಕಾರ ಮತ್ತು ಅದರ ವ್ಯವಹಾರವು ರೈತವಿರೋಧಿ ಎಂದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಆಕ್ಷೇಪಿಸಿದರು.
ಬೆಳಗಾವಿಯ ಸುವರ್ಣಸೌಧದ ಮೂಲಕ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕೆಂದು ಮಾನ್ಯ ಯಡಿಯೂರಪ್ಪ ಅವರು ಕನಸು ಕಂಡಿದ್ದರು. ರೈತರು, ಕಬ್ಬು ಬೆಳೆಗಾರರು, ದ್ರಾಕ್ಷಿ ಬೆಳೆಗಾರರು ಸಂಕಷ್ಟದಲ್ಲಿದ್ದು, ತೊಗರಿ, ಉದ್ದು ಬೆಳೆಯುವ ರೈತರೂ ಅತ್ಯಂತ ಕಷ್ಟದಲ್ಲಿದ್ದಾರೆ. ಕೇಂದ್ರದ ಕಡೆ ಬೊಟ್ಟು ಮಾಡುವುದನ್ನು ಬಿಟ್ಟು ಕಳೆದ 7 ತಿಂಗಳಲ್ಲಿ ನೀವೇನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದೇವೆ. ನಾನೂ ಅದನ್ನು ಕೇಳಿದ್ದೇನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆಂದು ಯಾರಿಗೂ ಗೊತ್ತಾಗುತ್ತಿಲ್ಲ. ಉಸ್ತುವಾರಿ ಸಚಿವರು ಪ್ರವಾಸ ಮಾಡಿ, ಪರಿಹಾರ ಕೊಡುವ ಕುರಿತು ಸಮಾಲೋಚನೆ ಮಾಡಬೇಕಿತ್ತು. ಅದನ್ನೂ ಕೂಡ ಮಾಡಿಲ್ಲ. ಬದಲಾಗಿ ಶಿವಾನಂದ ಪಾಟೀಲ್ ಸೇರಿ ಸಚಿವರು ಅಸಂಬದ್ಧ- ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದು ರೈತವಿರೋಧಿ, ಬಡವರ ವಿರೋಧಿ, ಕಿಂಚಿತ್ತು ಅಭಿವೃದ್ಧಿಯ ಕಾಳಜಿ ಇಲ್ಲದ ಸರಕಾರ ಎಂದು ಆಕ್ಷೇಪಿಸಿದರು.
ಅಭಿವೃದ್ಧಿ ಇಲ್ಲದ ಕಾರಣ ಕಾಂಗ್ರೆಸ್ ಶಾಸಕರೂ ತಮ್ಮ ಕ್ಷೇತ್ರದಲ್ಲಿ ತಲೆ ಎತ್ತಿ ಓಡಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು. ಒಂದು ರೂಪಾಯಿ ಅನುದಾನವನ್ನೂ ನೀಡಿಲ್ಲ. ಬಿಜೆಪಿ, ಜೆಡಿಎಸ್ ಶಾಸಕರಿಗೂ ಅಭಿವೃದ್ಧಿ ಸಂಬಂಧ ಅನುದಾನ ಕೊಟ್ಟಿಲ್ಲ ಎಂದು ವಿವರಿಸಿದರು.
ಮುಖ್ಯಮಂತ್ರಿಗಳು ಬರಗಾಲದ ಸಂಬಂಧ ಅನುದಾನ ಕೊಡುವ ಮಾತನಾಡುತ್ತಿಲ್ಲ. ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡುವುದಾಗಿ ಪ್ರಕಟಿಸುತ್ತಾರೆ. ಅಲ್ಪಸಂಖ್ಯಾತರ ಕಾಲೊನಿಗಳ ಅಭಿವೃದ್ಧಿಗೆ 1 ಸಾವಿರ ಕೋಟಿ ಕೊಡುವುದಾಗಿ ತಿಳಿಸಿದ್ದಾರೆ ಎಂದರು. ಹಾಗಿದ್ದರೆ ರೈತರು, ಬಡವರು, ಅಭಿವೃದ್ಧಿ ಕೆಲಸಗಳು ನಿಮ್ಮ ಆದ್ಯತಾ ಪಟ್ಟಿಯಲ್ಲಿ ಇಲ್ಲವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಜನರಿಗೆ ವಿಶ್ವಾಸ ಇಲ್ಲ. ಮೋದಿ ಗ್ಯಾರಂಟಿ ಬಗ್ಗೆ ವಿಶ್ವಾಸ ಇಟ್ಟಿದ್ದಾರೆ ಎಂಬುದು ಪಂಚರಾಜ್ಯ ಚುನಾವಣೆಯಲ್ಲಿ ಸಾಬೀತಾಗಿದೆ. ಕಾಂಗ್ರೆಸ್ ಗ್ಯಾರಂಟಿಯು ಸ್ವತಃ ಮುಖ್ಯಮಂತ್ರಿಗಳಿಗೇ ನುಂಗಲಾರದ ತುತ್ತಾಗಿದೆ ಎಂದು ತಿಳಿಸಿದರು.
ಪ್ರಮುಖರು ಮತ್ತು ಹಿರಿಯರ ಅಭಿಪ್ರಾಯ ಪಡೆದು ಬಿಜೆಪಿ ಜಿಲ್ಲಾ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡು ಒಂದು ತಿಂಗಳು ಈಗಾಗಲೇ ಕಳೆದಿದೆ. ರಾಜ್ಯದ ಪದಾಧಿಕಾರಿಗಳನ್ನು ಈಗಾಗಲೇ ಪ್ರಕಟಿಸಿದ್ದೇವೆ. ಎಲ್ಲ ಮೋರ್ಚಾದ ಅಧ್ಯಕ್ಷರನ್ನು ಘೋಷಿಸಿದ್ದೇವೆ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷ ಎಂದು ಘೋಷಿಸಿದ ಮರುದಿನ ಬೂತ್ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಪ್ರತಿಯೊಂದು ಜಿಲ್ಲೆಯಲ್ಲೂ ಕಾರ್ಯಾಲಯ, ಬೂತ್ ಅಧ್ಯಕ್ಷರ ಮನೆಗೆ ಭೇಟಿ ಕೊಡುತ್ತಿದ್ದೇನೆ. ಬಿಜೆಪಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರಿಗೆ ಕೊಡುವ ಮನ್ನಣೆ, ಗೌರವವನ್ನೇ ಒಬ್ಬ ಬೂತ್ ಅಧ್ಯಕ್ಷರಿಗೂ ಕೊಡಲಾಗುತ್ತದೆ ಎಂದು ವಿವರಿಸಿದರು. ಕಾಂಗ್ರೆಸ್ ಮತ್ತಿತರ ಪಕ್ಷಗಳಲ್ಲಿ ಇದನ್ನು ನಿರೀಕ್ಷಿಸಲು ಅಸಾಧ್ಯ ಎಂದು ತಿಳಿಸಿದರು.
ಒಬ್ಬಿಬ್ಬ ಹಿರಿಯರ ಸಮಸ್ಯೆ ಏನಿದ್ದರೂ ಕರೆದು ಬಗೆಹರಿಸಿ ಎಂದು ಪಕ್ಷದ ವರಿಷ್ಠರಿಗೆ ಕೋರಿದ್ದೇನೆ. ಯಾರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂಬ ಗುರಿ ನನ್ನದಲ್ಲ. ರಾಜ್ಯಾಧ್ಯಕ್ಷನಾಗಿ ಮುಂದಿನ ಲೋಕಸಭಾ ಚುನಾವಣೆಯ ಜವಾಬ್ದಾರಿ ನನ್ನ ಎದುರಿದೆ. ತಪಸ್ಸಿನಂತೆ ದೇಶವನ್ನು ಮುನ್ನಡೆಸುವ ಮೋದಿಜೀ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುವಂತೆ ಕೋರಿದ್ದು, ಅದರಂತೆ ಎಲ್ಲರೂ ಕೈಜೋಡಿಸಿದ್ದಾರೆ. ಯತ್ನಾಳ್ ಅವರು ಕೈ ಜೋಡಿಸುವ ವಿಶ್ವಾಸ ನನಗಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.