ಹೈದರಾಬಾದ್: ರಾಮೋಜಿ ಫಿಲ್ಮ್ ಸಿಟಿಯ ಸಂಸ್ಥಾಪಕ ರಾಮೋಜಿ ರಾವ್ ವಿಧಿವಶರಾಗಿದ್ದಾರೆ. 87 ವರ್ಷ ಹರೆಯದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೈದರಾಬಾದ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ಮುಂಜಾನೆ 3.45ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಈಟಿವಿ ಚಾನೆಲ್ ಮಾಲೀಕರೂ ಆಗಿದ್ದ ರಾಮೋಜಿ ರಾವ್ ಅವರು ಖ್ಯಾತ ಸಿನಿಮಾ ನಿರ್ಮಾಪಕರೂ ಆಗಿದ್ದಾರೆ. ಹೈದರಾಬಾದಿನಲ್ಲಿ ರಾಮೋಜಿ ಫಿಲಂ ಸಿಟಿ ಸ್ಥಾಪಿಸಿ ಸಿನಿಮಾಗಳ ನಿರ್ಮಾಣಕ್ಕೆ ಆಸರೆಯಾಗಿದ್ದರು. ಜನಪ್ರಿಯ ಈನಾಡು ಪತ್ರಿಕೆ, ಈಟಿವಿ ನೆಟ್ವರ್ಕ್, ರಮಾದೇವಿ ಪಬ್ಲಿಕ್ ಸ್ಕೂಲ್, ಉಷಾಕಿರಣ್ ಮೂವೀಸ್, ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಸಹಿತ ಹಲವು ಸಂಸ್ಥೆಗಳನ್ನು ಹುಟ್ಟುಹಾಕಿ ಸಾವಿರಾರು ಮಂದಿಗೆ ಉದ್ಯೋಗ ಒದಗಿಸಿದ ಖ್ಯಾತಿಯೂ ರಾಮೋಜಿ ರಾವ್ ಅವರದ್ದಾಗಿದೆ.
ರಾಮೋಜಿ ರಾವ್ ನಿಧನಕ್ಕೆ ಗಣ್ಯರನೇಕರು ಕಂಬನಿ ಮಿಡಿದಿದ್ದಾರೆ.