ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಹೇಳಿದ್ದ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳ ಹೆಸರಲ್ಲಿ ಅಶ್ಲೀಲ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಈ ಬಗ್ಗೆ ನಟಿ ರಮ್ಯಾ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೂಕ್ತ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರಮ್ಯಾಗೆ ಅಶ್ಲೀಲವಾಗಿ ಕಮೆಂಟ್ ಮಾಡಿ, ಅಸಭ್ಯ ಸಂದೇಶಗಳನ್ನು ಕಳಿಸಲಾಗಿದೆ. ಅಂಥವರಿಗೆ ಕಾನೂನಿನ ಮೂಲಕ ಪಾಠ ಕಲಿಸಲು ಕೋರಿ ರಮ್ಯಾ ಅವರು ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ಈ ಮೂಲಕ ಅವರು, ಹೆಣ್ಣುಮಕ್ಕಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ನಿಂದಿಸುವವರ ವಿರುದ್ಧ ಅವರು ಸಮರಾ ಸಾರಿದ್ದಾರೆ.
‘ಸೆಲೆಬ್ರಿಟಿಯಾದ ನಮಗೆ ಟ್ರೋಲ್ ಇದ್ದೇ ಇರುತ್ತದೆ. ಆದರೆ ಈ ಮಟ್ಟಕ್ಕೆ ನನಗೆ ಯಾವಾಗಲೂ ಅನುಭವ ಆಗಿರಲಿಲ್ಲ’ ಎಂದಿರುವ ನಟಿ ರಮ್ಯಾ, ರೇಣುಕಾಸ್ವಾಮಿ ಸಂದೇಶ ಕಳಿಸಿದ್ದಕ್ಕೂ ದರ್ಶನ್ ಫ್ಯಾನ್ಸ್ ಸಂದೇಶ ಕಳಿಸಿದ್ದಕ್ಕೂ ಯಾವುದೇ ವ್ಯತ್ಯಾಸ ಇಲ್ಲ ಎಂದಿದ್ದಾರೆ. ಇದನ್ನು ಸುಮ್ಮನೆ ಬಿಡಬಾರದು ಅಂತ ಅನಿಸಿತು. ಹಾಗಾಗಿ ಕಮಿಷನರ್ ಗೆ ದೂರು ಕೊಟ್ಟಿದ್ದೇನೆ’ ಎಂದು ನಟಿ ರಮ್ಯಾ ತಿಳಿಸಿದ್ದಾರೆ.
ರಮ್ಯಾ ಅವರ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಮೋದ ಗೌಡ ಎಂಬ ವ್ಯಕ್ತಿ ಸೇರಿ ಒಟ್ಟು 43 ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.