ಬೆಂಗಳೂರು; ಕೃಷಿಗೆ ಮುಖ್ಯವಾಗಿ ಬೇಕಿರುವುದು ಉತ್ತಮ ಗುಣಮಟ್ಟದ ಬೀಜದ ತಳಿಗಳು ಹಾಗೂ ತಂತ್ರಜ್ಞಾನ. ಈ ಮೂಲಕ ಕೃಷಿ ಅಭಿವೃದ್ಧಿ ಸಾಧ್ಯ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೃಷಿ ಇಲಾಖೆ ಸಂಗಮ ಸಭಾಂಗಣದಲ್ಲಿ ಬೀಜ ಪರಂಪರೆ ಕುರಿತು ರಾಷ್ಟ್ರೀಯ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ದೇಶಿ ಬೀಜ ಸಂರಕ್ಷಣೆಯ ಕುರಿತು ಈ ಚಿಂತನ ಮಂತನ ಸಂವಾದವನ್ನು ಏರ್ಪಡಿಸಿರುವುದು ತುಂಬಾ ಸಮಯೋಜಿತವಾಗಿದೆ ಹಾಗೂ ಶ್ಲಾಘನೀಯವಾಗಿದೆ. ಬೀಜ ಪರಂಪರೆಯ ಕುರಿತು ನಡೆಯುವ ಈ ಸಂವಾದವೂ ರೈತರು, ಸಂಶೋಧಕರು, ಅನ್ವೇಷಕರು ಹಾಗೂ ವಿವಿಧ ಸಂಬಂಧಿತ ಸಂಸ್ಥೆಗಳನ್ನು ಒಂದೇ ಸೂರಿನಡಿ, ಬೀಜ ಪರಂಪರೆ ಮತ್ತು ಆಹಾರ ವ್ಯವಸ್ಥೆಯ ಭವಿಷ್ಯದ ಬಗ್ಗೆ ಒಟ್ಟಾಗಿ ಚಿಂತನೆ ನಡೆಸಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದರು.
ಕೃಷಿಜೀವ ವೈವಿಧ್ಯತೆ, ರೈತರ ಜ್ಞಾನ, ಸಂಸ್ಕೃತಿ ಹಾಗೂ ಪರಂಪರೆಗಳ ಆಧಾರದ ಮೇಲೆ ಶತಮಾನಗಳ ಕಾಲದಿಂದ ಸ್ಥಳೀಯ ಆಹಾರ ಮತ್ತು ಪೌಷ್ಟಿಕ ಭದ್ರೆತೆ ರೂಪುಗೊಂಡಿದೆ. ದೇಶಿ ತಳಿಗಳು, ಪೌಷ್ಟಿಕತೆ ಮತ್ತು ಪರಿಸರ ಸುಸ್ಥಿರತೆಯನ್ನು ಕಾಪಾಡುತ್ತವೆ. ಆದರೆ ಇತ್ತಿಚಿನ ದಿನಗಳಲ್ಲಿ ರೈತರು ಒಂದೇ ಬೆಳೆ ಪದ್ದತಿ ಅಳವಡಿಸಿರುವುದರಿಂದ ಪ್ರಸ್ತುತ ಹವಾಮಾನ ವೈಪರಿತ್ಯದಿಂದ ಸ್ಥಳಿಯ ಜ್ಞಾನ ಬಳಕೆಯಾಗುತ್ತಿಲ್ಲ, ಬೇರೆ ದೇಶಗಳ ಆಧುನಿಕ ಕೃಷಿ ತಂತ್ರಜ್ಞಾನದ ಮುಂದೆ ನಮ್ಮ ದೇಶವೂ ಸ್ಪರ್ಧಿಸುವಂತಾಗಬೇಕು, ಇದು ಇಂದಿನ ದೊಡ್ಡ ಸವಾಲಾಗಿದೆ ಎಂದು ಹೇಳಿದರು.
ಈ ಸಂವಾದದಲ್ಲಿ ಪರಂಪರೆಯ ಬೀಜಗಳಿಗೆ ಬಲವಾದ ಮಾರುಕಟ್ಟೆ ಸಂಪರ್ಕಗಳನ್ನು ನಿರ್ಮಿಸುವುದು, ಹೊಸ ಪ್ರಯೋಗಗಳು ಹಾಗೂ ಡಿಜಿಟಲ್ ಸಾಧನಗಳನ್ನು ಉತ್ತೇಜಿಸುವ ಜೊತೆಗೆ ರೈತರು ಸಮಾನ ಹಾಗೂ ಸ್ಥಿರ ಬೀಜ ಉದ್ಯಮಗಳನ್ನು ನಡೆಸಿಕೊಂಡು ಹೋಗುವುದಕ್ಕೆ ಮಾರ್ಗಗಳ ಕುರಿತು ಈ ಸಂವಾದದಲ್ಲಿ ಚರ್ಚೆಯಾಗಲೆಂದು ಆಶಿಸುತ್ತೇನೆ ಎಂದು ಸಚಿವರು ತಿಳಿಸಿದರು.
ಕೃಷಿ ವಿವಿಗಳು, ವಿಜ್ಞಾನಿಗಳು, ಜೈವಿಕ ವೈವಿದ್ಯತೆಯ ಪ್ರದರ್ಶನ ತಾಕುಗಳಿಗೆ ಭೇಟಿ ಮಾಡಬೇಕು, ಹಾಗೂ ದೇಶಿ ತಳಿಗಳ ಪ್ರದರ್ಶನ ಹಾಗೂ ಸಮೂದಾಯದ ಮೂಲಕ ನಡೆಯುವ ಬೀಜ ಸಂರಕ್ಷಣಾ ಕಾರ್ಯಕ್ರಮಗಳಿಗೆ ಭೇಟಿ ನೀಡಿ, ಬೀಜ ಸಂರಕ್ಷಣೆಗೆ ನೆರವಾಗುವಂತೆ ಸಚಿವರು ಕರೆ ನೀಡಿದರು.
ಮುಖ್ಯಮಂತ್ರಿಗಳು 2024 ರ ಬಜೆಟ್ ನಲ್ಲಿ ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದು, ಲ್ಯಾಂಡ್ ರೇಸ್ ಗಳ ಸಂರಕ್ಷಣೆಗೆ 160 ಕೋಟಿ ಅನುದಾನ ನೀಡಿದ್ದಾರೆ, ಈ ಮೂಲಕ ಬೀಜ ಪರಂಪರ ಕಾರ್ಯಕ್ರಮ ಯಶಸ್ವಿಯಾಗಬೇಕು ಎಂದು ಕೃಷಿ ಸಚಿವರು ಹಾರೈಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇರಳ, ಮಧ್ಯಪ್ರದೇಶ, ಅಸ್ಸಾಂ, ಒಡಿಶಾ, ತಮಿಳುನಾಡು ಸೇರಿದಂತೆ ಇತರ ರಾಜ್ಯದ ದೇಶಿ ಬೀಜ ತಳಿ ಸಂರಕ್ಷಕರನ್ನು ಸಚಿವರು ಸನ್ಮಾಸಿದರು. ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ್ ದಳವಾಯಿ, ಕೃಷಿ ಇಲಾಖೆ ಆಯುಕ್ತ, ವೈ.ಎಸ್ .ಪಾಟೀಲ್, ನಿರ್ದೇಶಕ ಡಾ. ಜಿ.ಟಿ.ಪುತ್ರ, ಬೆಂಗಳೂರು ಕೃಷಿ ವಿವಿಯ ಕುಲಪತಿ ಡಾ.ಸುರೇಶ್, ಧಾರವಾಡ ಕೃಷಿ ವಿವಿ ಕುಲಪತಿ ಡಾ.ಪಾಟೀಲ್, ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು.






















































