ಕೊರೊನಾದ ಆತಂಕಕ್ಕೆ ಇಡೀ ವಿಶ್ವವೇ ನಲುಗಿದೆ. ಕರ್ನಾಟಕದಲ್ಲೂ ಕೊರೊನಾ ಅಟ್ಟಹಾಸ ಮುಂದುವರೆಸಿದ್ದು ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ೭ಕ್ಕೆ ಏರಿಕೆ ಕಂಡಿದೆ. ಈ ಜಿಲ್ಲೆಯಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಇನ್ಫೋಸಿಸ್ ಫೌಂಡೇಶನ್ ನೆರವು ನೀಡಿದೆ. ಇನ್ಫೋಸಿಸ್ ಫೌಂಡೇಶನ್ ಸ್ಪಂದನೆಗೆ ಜಿಲ್ಲಾಡಳಿತ ಧನ್ಯವಾದ ತಿಳಿಸಿದೆ. ಇನ್ಫೋಸಿಸ್ ಫೌಂಡೇಶನ್ ಕಾರ್ಯಕ್ಕೆ ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಇನ್ಫೋಸಿಸ್ ಫೌಂಡೇಶನ್ ೨೮ ಲಕ್ಷ ರೂಪಾಯಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೊರೊನಾ ವೈರಸ್ ತಡೆಗೆ ನೀಡಿದೆ. ಜಿಲ್ಲಾಡಳಿತ ಈ ಬಗ್ಗೆ ಹಲವು ಸಂಸ್ಥೆಗಳಿಗೆ ಮನವಿ ಮಾಡಿತ್ತು. ಆ ಪೈಕಿ ಶೀಘ್ರವಾಗಿ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ ನೆರವಿಗೆ ಬಂದಿದ್ದಾರೆ. ಈಗಾಗಲೇ ಅನೇಕ ತುರ್ತು ಸಮಯದಲ್ಲಿ ಸಹಾಯದ ಹಸ್ತ ಚಾಚಿರುವ ಅವರು ಮತ್ತೊಮ್ಮೆ ಸ್ಪಂದಿಸಿದ್ದಾರೆ.
ವೈದ್ಯಕೀಯ ಉಪಕರಣ ಹಾಗೂ ಚಿಕಿತ್ಸೆ ಬೇಕಾಗುವ ವಸ್ತುಗಳನ್ನು ಇದರಿಂದ ಜಿಲ್ಲಾಡಳಿತ ಸರಬರಾಜು ಮಾಡಿದೆ. ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಅನೇಕ ವಸ್ತುಗಳನ್ನು ನೀಡದೆ. ಆ ವಸ್ತುಗಳ ವಿವರ ಹೀಗಿದೆ. ೫೦೦ ಮಿಲಿ ಲೀಟರ್‌ನ ೫೦೦೦ ಬಾಟಲ್ ಸ್ಯಾನಿಟೈಸರ್, ೧,೬೫೦೦೦ ಮಾಸ್ಕ್, ೨೦೦೦ ಎನ್ ೯೫ ಮಾಸ್ಕ್, ೫೦ ಕ್ಯಾಪ್ ಗಳು, ೬೦ ವಿಶೇಷ ಮಾದರಿಯ ಸರ್ಜಿಕಲ್ ಗ್ಲೌಸ್, ೦೩ ಬ್ಲಾಕ್ ಸರ್ಜಿಕಲ್ ಗ್ಲೌಸ್, ೮೫ ಗಾಗಲ್ಸ್, ೩೦೦ ಫಾಗ್ ಫ್ರೀ ಮಾಸ್ಕ್ ಗಳನ್ನು ಮಂಗಳೂರು ಜಿಲ್ಲಾಡಳಿತ ನೀಡಿದೆ. ಈವರೆಗೆ ಭಾರತದಲ್ಲಿ ೮೨೬ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಕರ್ನಾಟಕದಲ್ಲಿ ೫೫ ಪಾಸಿಟಿವ್ ಕೇಸ್‌ಗಳು ದೃಢಪಟ್ಟಿವೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕೊರೊನಾ ಭೀತಿ ಹೆಚ್ಚಿದೆ.