ಗದಗ: ಟ್ರ್ಯಾಕ್ಟರ್ ಸಾಲದ ವಿಚಾರವಾಗಿ ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋನಾಳ್ ಗ್ರಾಮದಲ್ಲಿ ನಡೆದಿದೆ.
ಮೃತರನ್ನು 49 ವರ್ಷದ ರೇಣುಕಾ ತೇಲಿ, ಆಕೆಯ ಮಗ 22 ವರ್ಷದ ಮಂಜುನಾಥ ತೇಲಿ ಮತ್ತು ಆಕೆಯ ತಾಯಿಯ ಚಿಕ್ಕಮ್ಮ 47 ವರ್ಷದ ಸಾವಕ್ಕ ತೇಲಿ ಎಂದು ಗುರುತಿಸಲಾಗಿದೆ. ಟ್ರಾಕ್ಟರ್ ಖರೀದಿಸಲು ಪಡೆದ ಸಾಲವನ್ನು ಮರುಪಾವತಿ ಮಾಡುವ ಬಗ್ಗೆ ತಾಯಿ ರೇಣುಕಾ ಮತ್ತು ಮಗ ಮಂಜುನಾಥ್ ನಡುವೆ ಉಂಟಾದ ಭಿನ್ನಾಭಿಪ್ರಾಯ ಈ ಪ್ರಕರಣಕ್ಕೆ ಕಾರಣವಾಯಿತೆಂದು ಎಂದು ಪೊಲೀಸರು ತಿಳಿಸಿದ್ದಾರೆ.
ರೇಣುಕಾ ತೇಲಿ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಮುಂದಾದಾಗ, ಆಕೆಯ ಮಗ ಮಂಜುನಾಥ್ ತಡೆಯಲೆತ್ನಿಸಿ ತಾನೂ ರೈಲಿಗೆ ಸಿಲುಕಿದದ್ದಾನೆ. ಈ ಸಾವಿನ ಸುದ್ದಿ ತಿಳಿದು ಮಂಜುನಾಥ್ ಅವರ ತಾಯಿಯ ಚಿಕ್ಕಮ್ಮ ಸಾಕವ್ವ ತೇಲಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.






















































