ಬೀದರ್: ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಭಾಗದ ನೀರಾವರಿ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕು. ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ, ಕಾರ್ಖಾನೆಗಳ ಅಭಿವೃದ್ಧಿಗೂ ಆದ್ಯತೆ ನೀಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಎಂಟನೇ ದಿನದ ವಿಧಾನಸಭೆ ಕಲಾಪದಲ್ಲಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗ ಅಬಿವೃದ್ಧಿಯಾಗಬೇಕಾದರೆ, ಈ ಭಾಗಕ್ಕೆ ಹೆಚ್ಚಿನ ಅನುದಾನವನ್ನು ಸರ್ಕಾರ ನೀಡಬೇಕು. ಖಾಲಿ ಇರುವ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕೆಂದರು.
ಅತ್ಯಂತ ಹಿಂದುಳಿದ ಜಿಲ್ಲೆ ಬೀದರ್:
ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ಬೀದರ್ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದೆ. ಜಿಲ್ಲೆಯ ಜನರಿಗೆ, ರೈತರಿಗೆ ನೀರಾವರಿ ಸೌಕರ್ಯಗಳು ಆಗಬೇಕಾಗಿದೆ. ಕಾರಂಜಾ ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರ ನೀಡಬೇಕು. ಹಾಲಮಟ್ಟಿ ಸಂತ್ರಸ್ತರಿಗೆ ನೀಡಿದಂತೆ ಕಾರಂಜಾ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂಬುದು ನಮ್ಮ ಭಾಗದ ರೈತರ ಮನವಿಯಾಗಿದೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದರು.
ನಾವು ಬೀದರ್ ನವರು ಏನು ಪಾಪ ಮಾಡಿದ್ದೀವಿ:
ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದಾಗ ಬೀದರ್ ಜಿಲ್ಲೆಯ ನೀರಾವರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಮೂರು ನೂರು ಕೋಟಿ ರೂ. ಮೀಸಲಿಡಲಾಗಿತ್ತು. ಜಿಲ್ಲೆಯ ನೀರಾವರಿ, ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿತ್ತು. ಆದರೇ ಈಗ ಅಷ್ಟೊಂದು ಅನುದಾನ ಬರುತ್ತಿಲ್ಲ. ಅಂದು ಮೀಸಲಿಡಲಾಗಿದ್ದ ಅನುದಾನವನ್ನು ಬಿಡುಗಡೆ ಮಾಡಬೇಕು. ನಮ್ಮ ಜಿಲ್ಲೆಯನ್ನು ಕಡೆಗಣಿಸಬಾರದು. ನಾವು ಬೀದರ್ ನವರು ಏನು ಪಾಪ ಮಾಡಿದ್ದಿವೆಂದು ಶಾಸಕರು ಪ್ರಶ್ನಿಸಿದರು.
ಬೀದರ್ ಜಿಲ್ಲೆಯಲ್ಲಿ ಮೊದಲು ನೂರು ಅಡಿ ಕೊರೆದರೆ ಬೋರ್ವೆಲ್ ನಲ್ಲಿ ನೀರು ಬರುತ್ತಿತ್ತು. ಈಗ ಆರೇಳು ನೂರು ಅಡಿ ಬೋರ್ವೆಲ್ ಕೊರೆಯುವ ಪರಿಸ್ಥಿತಿ ಬಂದಿದೆ. ಅಂತರಜಲ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಅದಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ರಚನೆ ಮಾಡಬೇಕೆಂದರು.
ಹಿಂದೆ ಖರ್ಗೆ, ಧರ್ಮಸಿಂಗ್ ಸೇರಿದಂತೆ ಅನೇಕರ ಹೋರಾಟದ ಫಲವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ಸಿಕ್ಕಿದೆ. ಈಗ ಫೈನಾನ್ಸಿಯಲ್ ಇನ್ಕ್ಲೂಜನ್ ಕೊಡಬೇಕಾಗಿದೆ. ರಾಜ್ಯ, ಕೇಂದ್ರ ಸರ್ಕಾರಗಳ ಅನುದಾನ ಬರಬೇಕು. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ವಿದ್ಯುತ್ ಸಮಯ ಹೆಚ್ಚಿಸಬೇಕು:
ನಮ್ಮ ಬೀದರ್ ಜಿಲ್ಲೆ ಗಡಿ ಜಿಲ್ಲೆಯಾಗಿದ್ದು, ಒಂದು ಕಡೆ ತೆಲಂಗಾಣ ಇನ್ನೊಂದು ಕಡೆ ಮಹಾರಾಷ್ಟ್ರ ಇದೆ. ತೆಲಂಗಾಣದಲ್ಲಿ ರೈತರ ಪಂಪ್ ಸೆಟ್ ಗಳಿಗೆ 24 ತಾಸು ವಿದ್ಯುತ್ ನೀಡ್ತಿದ್ದಾರೆ. ಇಲ್ಲಿ 6-7 ತಾಸು ನೀಡಲಾಗ್ತಿದೆ. ಕನಿಷ್ಠ ಹನ್ನೆರಡು ತಾಸು ಆದರೂ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡಬೇಕು.
ನಂಜುಂಡಪ್ಪ ಕಮಿಟಿಯ ವರದಿಯಂತೆ ಶಾಸಕರಿಗೆ ಅನುದಾನ ನೀಡಲಾಗ್ತಿದೆ. ಅದರಿಂದ ನಮ್ಮ ಕ್ಷೇತ್ರಕ್ಕೆ ಅನ್ಯಾಯವಾಗ್ತಿದೆ. ಅತಿ ಕಡಿಮೆ ಅನುದಾನ ನಮಗೆ ಸಿಗುತ್ತಿದೆ. ನಮ್ಮ ಕ್ಷೇತ್ರದಲ್ಲೂ ಹೆಚ್ಚಿನ ಹಳ್ಳಿಗಳಿವೆ. ನಂಜುಂಡಪ್ಪ ಕಮಿಟಿಯ ಶಿಫಾರಸುಗಳನ್ನು ಮರುಪರಿಶೀಲನೆ ಮಾಡಬೇಕೆಂದರು.
ಶಿವಾಜಿ ಮಹಾರಾಜರ ಪ್ರತಿಮೆಗೆ ಮಸಿ ಬಡಿದಿರುವುದು ತಪ್ಪು, ಇನ್ನೂ ಈ ಕಡೆ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಧ್ವಂಸ ಮಾಡಿದ್ದಾರೆ. ಮಹಾತ್ಮರ ವಿಷಯದಲ್ಲಿ ಪುಂಡಾಟಿಕೆ ನಡೆಸಿದವರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.
ಬಿಎಸ್ಎಸ್ಕೆ ಅದು ಹಳೆಯ ಕಾರ್ಖಾನೆಯಾಗಿದೆ. ಕುಮಾರಸ್ವಾಮಿರವರು ಅಧಿಕಾರದಲ್ಲಿದ್ದಾಗ ಇಪ್ಪತ್ತು ಕೋಟಿ ಅನುದಾನ ನೀಡಿದ್ದರು. ಈಗ ಬಿಜೆಪಿ ಸರ್ಕಾರ ಅನುದಾನ ನೀಡಿಲ್ಲ. ಬಿಎಸ್ಎಸ್ಕೆಗೆ ಅನುದಾನ ನೀಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.