ನವದೆಹಲಿ: ಕರ್ನಾಟಕದಲ್ಲಿ ರಸಗೊಬ್ಬರದ ಅಭಾವವಿಲ್ಲ. ಕೇಂದ್ರ ಸರ್ಕಾರದಿಂದ ಸರಬರಾಜು ಆಗಿರುವ ರಸಗೊಬ್ಬರಗಳಲ್ಲಿ 1.65 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಸಂಗ್ರಹಣೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ರೈತರಿಗೆ ಬೇಕಾದ ರಸಗೊಬ್ಬರಗಳನ್ನು ರಾಜ್ಯ ಸರ್ಕಾರಕ್ಕೆ ಈಗಾಗಲೇ ನೀಡಲಾಗಿದ್ದು, ಸರಿಯಾದ ಕ್ರಮದಲ್ಲಿ ಬಳಸಬೇಕಿದೆ. ಇನ್ನೂ ರಸಗೊಬ್ಬರದ ಬೇಡಿಕೆ ಹೆಚ್ಚಿದ್ದು, ಅಗತ್ಯ ರಸಗೊಬ್ಬರಗಳನ್ನು ಕರ್ನಾಟಕಕ್ಕೆ ಸರಬರಾಜು ಮಾಡುವಂತೆ ಕೋರಿ ಸೋಮವಾರ ರಾಜ್ಯದ ಎಲ್ಲಾ ಬಿಜೆಪಿ ಸಂಸದರು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವರಾದ ಜೆಪಿ ನಡ್ಡಾ ರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಲಾಗಿದೆ ಎಂದು ಜೋಶಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ರೈತರ ಬೆನ್ನೆಲುಬಾಗಿ ನಿಂತಿದ್ದು, ಎಂತಹದ್ದೇ ಸಮಯದಲ್ಲೂ ರೈತರ ಹಿತ ಕಾಪಾಡುವುದು ನಮ್ಮ ಸರ್ಕಾರದ ಧ್ಯೇಯವಾಗಿದೆ ಎಂದಿರುವ ಜೋಶಿ, ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವ ಜೆಪಿ ನಡ್ಡಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.