ಬೆಂಗಳೂರು: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷಾ ಕೊಲೆಯನ್ನು ಮುಸ್ಲಿಂ ಗೂಂಡಾಗಳು ನಡೆಸಿದ್ದಾರೆ ಎಂಬ ತಮ್ಮ ಹೇಳಿಕೆಯನ್ನು ಸಚಿವ ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಎದಿರೇಟು ನೀಡಿದ ಈಶ್ವರಪ್ಪ, ಕೊಲೆ ಘಟನೆ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಎಸ್ಪಿ ಜೊತೆ ಮಾತನಾಡಿದ್ದೆ. ಮುಸ್ಲಿಂ ಯುವಕರೇ ಕೃತ್ಯ ನಡೆಸಿರುವ ಸುಳಿವು ಸಿಕ್ಕಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಅದನ್ನೇ ನಾನು ಹೇಳಿದ್ದೆ ಎಂವರು ತಿಳಿಸಿದರು. ಪ್ರಕರಣದಲ್ಲಿ ಬಂಧನಕ್ಕೆ ಒಳಗಾದವರೆಲ್ಲಾ ಮುಸ್ಲಿಂರು. ಈಗಲಾದರೂ ಕೊಲೆ ಮಾಡಿದ್ದು ಮುಸ್ಲಿಂರು ಎನ್ನುವುದನ್ನು ಬಿ.ಕೆ.ಹರಿಪ್ರಸಾದ್ ಒಪ್ಪಿಕೊಳ್ಳುತ್ತಾರೆಯೇ? ಎಂದು ಈಶ್ವರಪ್ಪ ಖಾರವಾಗಿ ಪ್ರಶ್ನಿಸಿದರು.
ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪಿತೂರಿ?
ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಗೋ ರಕ್ಷಣೆ ಮಾಡುವ ಹಿಂದೂ ಹುಡುಗರನ್ನು ಕೊಲೆ ಮಾಡುತ್ತಿದ್ದರು. ಈಗ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂದು ಹಿಂದೂ ಯುವಕರ ಕೊಲೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಈಶ್ವರಪ್ಪ, ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ತನಿಖೆಯನ್ನು ಎನ್ಐಎ ಮೂಲಕ ಮಾಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.