ಚಿಕ್ಕಮಗಳೂರು: ಮುಂದಿನ 8-10 ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.10ಕ್ಕಿಂತ ಕಡಿಮೆಯಾಗುವ ವಿಶ್ವಾಸವಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಸಭೆ ನಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅಧಿಕಾರಿಗಳೊಂದಿಗೆ ಕೂಲಂಕಷವಾಗಿ ಚರ್ಚಿಸಲಾಗಿದೆ. ನ್ಯೂನತೆಗಳನ್ನು ಸರಿಪಡಿಸುವ ಬಗ್ಗೆಯೂ ಸೂಚನೆ ನೀಡಲಾಗಿದೆ. ಈಗ ಜಿಲ್ಲೆಯಲ್ಲಿ 24-25% ಪಾಸಿಟಿವಿಟಿ ದರವಿದ್ದು, ಇದು 10% ಕ್ಕಿಂತ ಕಡಿಮೆಯಾಗಲಿದೆ. ಜಿಲ್ಲಾಧಿಕಾರಿಗಳು, ಸಿಇಒಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಇಲ್ಲಿ ಬಂದು ಪರಿಶೀಲನೆ ನಡೆಸಿ ಸೂಚನೆ ನೀಡಿದ್ದಾರೆ ಎಂದರು.
ರೋಗಿಗಳನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಿಸಲು ಸರ್ಕಾರ ಸೂಚಿಸಿದೆ. ಆದರೆ ಜಿಲ್ಲೆಯಲ್ಲಿ ಅದರ ಅನುಷ್ಠಾನ ಸರಿಯಾಗಿಲ್ಲ. ನೂರಕ್ಕೆ ನೂರರಷ್ಟು ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಿದಾಗ ಸೋಂಕು ಕಡಿಮೆಯಾಗುತ್ತದೆ ಎಂದು ಎಲ್ಲ ಚುನಾಯಿತ ಪ್ರತಿನಿಧಿಗಳು ಹೇಳಿದ್ದಾರೆ. ಇದರ ಅನುಷ್ಠಾನ ಮಾಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ ಎಂದರು.
ರಾಜ್ಯದಲ್ಲಿ ಅನ್ ಲಾಕ್ ಮಾಡಲೇಬೇಕಾಗುತ್ತದೆ. ಇಲ್ಲಿ ಜನ ಜೀವನ ಒಂದೆಡೆಯಾದರೆ, ಜೀವ ಉಳಿಸುವುದು ಇನ್ನೊಂದು ಕಡೆ ಇದೆ. ಇವೆಡರನ್ನೂ ಸಮತೋಲನದಿಂದ ನೋಡುವ ಹೊಣೆ ಸರ್ಕಾರದ ಮೇಲಿದೆ. ಅದಕ್ಕಾಗಿಯೇ ಶೇ.5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳನ್ನು ನೋಡಿಕೊಂಡು ಹಂತಹಂತವಾಗಿ ಸಡಿಲಿಕೆ ಮಾಡಲು ತೀರ್ಮಾನಿಸಲಾಗಿದೆ. ಹೆಚ್ಚಿರುವ ಕಡೆ ಬಿಗಿ ಕ್ರಮ ಜಾರಿಯಲ್ಲಿರಲಿದೆ ಎಂದು ಸ್ಪಷ್ಟಪಡಿಸಿದರು.
ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಇದು ಕೇವಲ ಆರೋಗ್ಯ ಅಥವಾ ಕಂದಾಯ ಇಲಾಖೆಗೆ ಸೀಮಿತವಲ್ಲ. ಎಲ್ಲ ಇಲಾಖೆಗಳ ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡಬೇಕು ಎಂದರು.