ಬೆಂಗಳೂರು: ಸುಲಲಿತ ವ್ಯವಹಾರ (ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್) ಕ್ಕೆ ಸಂಬಂಧಿಸಿದಂತೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದುಕೊಂಡಿದೆ.
2020ರ ಸೆಪ್ಟೆಂರ್‌ನಲ್ಲಿ ಬಿಡುಗಡೆಯಾಗಿದ್ದ ಕಳೆದ ಸಾಲಿನ ಶ್ರೇಯಾಂಕ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ, “ಟಾಪ್ ಅಚೀವರ್” ಆಗಿ ಹೊರಹೊಮ್ಮಿರುವುದು ವಿಶೇಷ.
2020ರ ವಹಿವಾಟು ಸುಧಾರಣೆ ಕ್ರಿಯಾ ಯೋಜನೆಯಲ್ಲಿ (ಎಸ್‌ಬಿಆರ್‌ಎಪಿ) ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಾರ್ಷಿಕ ಸುಧಾರಣಾ ಕ್ರಮಗಳ ಪರಿಶೀಲನಾ ವರದಿ ಇಂದು ಬಿಡುಗಡೆಯಾಗಿದೆ. ಕಳೆದ ವರ್ಷ, ಡಿಪಿಐಐಟಿ ಸೂಚಿಸಿದ್ದ 187 ಸುಧಾರಣಾ ಕ್ರಮಗಳಲ್ಲಿ ಶೇ.100ರಷ್ಟು ಅನುಷ್ಠಾನಗೊಳಿಸಿದ್ದರೂ, ಕರ್ನಾಟಕ 2019 ರಲ್ಲಿ 17ನೇ ಸ್ಥಾನಕ್ಕೆ ಕುಸಿದಿತ್ತು.
ಹಲವು ಸುಧಾರಣಾ ಕ್ರಮಗಳ ಅನುಷ್ಠಾನದ ಜತೆಗೆ, ರಾಜ್ಯದ 30ಕ್ಕೂ ಹೆಚ್ಚು ಇಲಾಖೆಗಳ ನಡುವಿನ ಸಮನ್ವಯತೆ ಮತ್ತು ಪೂರಕ ಪ್ರಯತ್ನಗಳಿಂದ ಪ್ರಸಕ್ತ ಸಾಲಿನಲ್ಲಿ ರಾಜ್ಯ, ಈ ಶ್ರೇಣಿಗೆ ಏರಲು ಸಾಧ್ಯವಾಗಿದೆ. ಆಂಧ್ರ ಪ್ರದೇಶ, ಗುಜರಾತ್, ಹರಿಯಾಣ, ಪಂಜಾಬ್, ತಮಿಳುನಾಡು, ತೆಲಂಗಾಣ ಸಹ “ಅಗ್ರ ಸಾಧಕ” ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.
ರ‍್ಯಾಂಕಿಂಗ್ ಹೇಗೆ?
ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಮಿಕರ ನಿಯಂತ್ರಣ ಕಾಯ್ದೆ, ಪರಿಸರ ಪರವಾನಗಿ, ಪ್ರಕ್ರಿಯೆಗಳ ಸರಳೀಕರಣ, ಬಳಕೆದಾರರ ಸಂಪರ್ಕ, ಪ್ರತಿಕ್ರಿಯೆ, ಕುಂದುಕೊರತೆಗಳ ನಿವಾರಣೆ ಸೇರಿದಂತೆ ವಿವಿಧ ಅಂಶಗಳ ಸಮೀಕ್ಷೆ ನಡೆಸಿದ ಡಿಪಿಐಐಟಿ ಶ್ರೇಯಾಂಕ ನಿರ್ಧರಿಸುತ್ತದೆ.







































































