ತುಮಕೂರು: ಕಲ್ಪತರು ನಾಡಿನ ಸಿದ್ಧಗಂಗಾ ಮಠ ಇದೀಗ ಉತ್ತರಾಧಿಕಾರಿ ಆಯ್ಕೆ ವಿಚಾರದಿಂದಾಗಿ ಕುತೂಹಲದ ಕೇಂದ್ರಬಿಂದುವಾಗಿದೆ. ಈಗಾಗಾಲೇ ಉತ್ತರಾಧಿಕಾರಿಯಾಗಿ ಗುರುತಾಗಿರುವ ಸ್ವಾಮಿಗಳಿಗೆ ಇಂದು ಜಂಗಮಪಟ್ಟಾಧಿಕಾರ ಮಹೋತ್ಸವ ನೆರವೇರಿಸಲಾಯಿತು.
ಮಠದ ಉತ್ತರಾಧಿಕಾರಿಗೆ ಶ್ರೀ ಶಿವಸಿದ್ದೇಶ್ವರ ಎಂದು ನಾಮಕರಣ ಮಾಡಿ ಯೋಗ ಪಟ್ಟ ನೀಡಲಾಯಿತು.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಹಿತ ವಿವಿಧ ಮಠಗಳ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಸಿದ್ಧಗಂಗಾ ಮಠದ ಪೀಠಾಧಿಪತಿಯಾಗಿರುವ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಈ ಕೈಂಕರ್ಯ ನೆರವೇರಿಸಿದರು.
ಬಸವಜಯಂತಿ ಸಂದರ್ಭದಲ್ಲೇ ಈ ಪಟ್ಟಾಭಿಷೇಕ ಕಾರ್ಯಕ್ರಮ ನಡೆದಿದ್ದು ವಿಶೇಷ. ಅಪಾರ ಸಂಖ್ಯೆಯಲ್ಲಿ ಭಕ್ತರು ಈ ಕೈಂಕರ್ಯಕ್ಕೆ ಸಾಕ್ಷಿಯಾದರು.
ಇದೇ ವೇಳೆ ಮಾಗಡಿ ಕಂಚುಗಲ್ ಬಂಡೆಮಠದ ಉತ್ತರಾಧಿಕಾರಿಗೆ ಶ್ರೀ ಮಹಾಲಿಂಗ ಸ್ವಾಮೀಜಿ ಎಂದು ಹಾಗೂ ದೇವನಹಳ್ಳಿಯ ಬಸವಕಲ್ಯಾಣ ಮಠದ ಉತ್ತರಾಧಿಕಾರಿಗೆ ಶ್ರೀ ಸದಾಶಿವ ಸ್ವಾಮೀಜಿ ಎಂಬ ಅಭಿದಾನ ನೀಡಲಾಗಿದೆ.