ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜಕೀಯ ಪಿತೂರಿ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷರೈ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡಾ ಪ್ರಕರಣದಲ್ಲಿ ಇಡಿ ತನಿಖೆ ಕುರಿತು ಪ್ರತಿಕ್ರಿಯೆ ನೀಡಿದರು. “ಒಂದು ಪ್ರಕರಣ ಎಂದರೆ ಅದರ ತನಿಖೆ ಸುದೀರ್ಘ ಪ್ರಕ್ರಿಯೆಯಾಗಿದೆ. ಇಲ್ಲಿ ಅಕ್ರಮ ನಡೆದಿದೆಯೇ ಇಲ್ಲವೇ ಎಂದು ನ್ಯಾಯಾಲಯ ವಿಚಾರಣೆ ಮಾಡಬೇಕೆ ಹೊರತು, ನೀವು ನಾನು ವಿಚಾರಣೆ ಮಾಡುವಂತಹದಲ್ಲ. ನಾನು ಇಡಿ ತನಿಖೆ ನೋಡಿದ್ದೇನೆ. ಈ ಪ್ರಕರಣದ ಬಗ್ಗೆ ನಾನು ಹೆಚ್ಚಿಗೆ ಏನು ಹೇಳುವುದಿಲ್ಲ. ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬದ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ. ಮುಖ್ಯಮಂತ್ರಿಗಳಾಗಲಿ, ಅವರ ಧರ್ಮಪತ್ನಿ ಅವರಾಗಲಿ ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ಈ ವಿಚಾರ ಬಿಟ್ಟು ರಾಜ್ಯದ ವಿಚಾರದ ಬಗ್ಗೆ ಗಮನಹರಿಸಿ” ಎಂದು ಶಿವಕುಮಾರ್ ತಿಳಿಸಿದರು.