ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಕಟ್ಟಿದ್ದ ಹ್ಯೂಬ್ಲೊಟ್ ವಾಚ್ ಕೊಟ್ಟಿದ್ದವರು ಯಾರು? ಅದು ಅಸಲಿಮಾಲ ಅಥವಾ ಕಳ್ಳಮಾಲ? ಎಂದು ಪ್ರತಿಪಕ್ಷ ನಾಯಕರನ್ನು ಪ್ರಶ್ನಿಸಿದ ಹೆಚ್.ಡಿ.ಕುಮಾರಸ್ವಾಮಿ..
ಬೆಂಗಳೂರು: ಮುಖ್ಯಮಂತ್ರಿ ಆಗಿದ್ದಾಗ ಕೈಗೆ ಕಟ್ಟಿಕೊಂಡು ಮೆರೆದ ಹ್ಯೂಬ್ಲೆಟ್ ವಾಚ್ ಅನ್ನು ತಂದು ಕೊಟ್ಟವರು ಯಾರು? ಅದು ನಿಮ್ಮ ಕೈ ಸೇರಿದ್ದು ಹೇಗೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಹಾಸನದಲ್ಲಿ ಸೋಮವಾರ ಮಾಜಿ ಪ್ರಧಾನಿ ದೇವೇಗೌಡರು, ಜೆಡಿಎಸ್ ಪಕ್ಷ ಹಾಗೂ ತಮ್ಮ ಬಗ್ಗೆ ಟೀಕೆ ಮಾಡಿರುವ ಸಿದ್ಧರಾಮಯ್ಯ ಅವರಿಗೆ ಟ್ವೀಟರ್ ಮೂಲಕ ಮಾಜಿ ಮುಖ್ಯಮಂತ್ರಿಗಳು ತಿರುಗೇಟು ನೀಡಿದ್ದಾರೆ.
ಅಲ್ಲದೆ 2008-0 9ರಲ್ಲಿ ನಡೆದ ಆಪರೇಷನ್ ಕಮಲ ಡೀಲ್ ನಲ್ಲಿ ಪಡೆದುಕೊಂಡ ಹಣ ಎಷ್ಟು ಎಂಬುದಾಗಿಯೂ ಕುಮಾರಸ್ವಾಮಿ ಅವರು ಕೇಳಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು, ಆಪರೇಷನ್ ಕಮಲ ಬಿಜೆಪಿ ಪಾಪದ ಕೂಸು. ಆ ಕೂಸಿಗೆ ಹಾಲೆರೆದವರು ಯಾರಯ್ಯ ಸುಳ್ಳುರಾಮಯ್ಯ? ಇಂಥ ಅನೈತಿಕ ಕೂಸಿಗೆ ಹಾಲೆರೆದು ಬೆಳೆಸಿ, ದೊಡ್ಡದು ಮಾಡಿದ ನೀವು, ಜೆಡಿಎಸ್ ಪಕ್ಷ ಬಿಜೆಪಿ ಬೀ ಟಿಂ ಎಂದು ಹಾದಿಬೀದಿಯಲ್ಲಿ ಜಾಗಟೆ ಹೊಡೆಯುತ್ತಿದ್ದೀರಲ್ಲ? ಇದ್ಯಾವ ಸೀಮೆ ರಾಜಕೀಯ? ಪ್ರಶ್ನಿಸಿದ್ದಾರೆ
ದೇವೇಗೌಡರ ನೈತಿಕತೆ ಬಗ್ಗೆ ಪ್ರಶ್ನಿಸುವ ಸಿದ್ದಹಸ್ತನೇ, ನೀವೇ ʼಪರ್ಸಂಟೇಜ್ ವ್ಯವಹಾರದ ಪಿತಾಮಹʼ.
ಆಪ್ತಶಾಸಕರಿಗೆ ಮೀಟಿಂಗ್ʼಗೆ ಇಂತಿಷ್ಟು ಎಂದು ಕೊಟ್ಟು ಕಮೀಷನ್ ಹೊಡೆದ ಕಥೆ, ಕಾದಂಬರಿ ಬರೆಯುವಷ್ಟಿದೆ. ಅರ್ಕಾವತಿ ರೀಡೂ ರಿಂಗ್ʼಮಾಸ್ಟರ್ ಆಗಿ ಅಡ್ಡಡ್ಡ ನುಂಗಿ ಕೆಂಪಣ್ಣ ಆಯೋಗದ ಕೃಪೆಯಿಂದ ಪಾರಾದ ನಿಮ್ಮ ಯೋಗ್ಯತೆ ನನಗೆ ಗೊತ್ತಿಲ್ಲವೇ? ಎಂದವರು ಹೇಳಿದ್ದಾರೆ.
ಕದ್ದಮಾಲು ಕೈಗೆ ಕಟ್ಟಿ ಸಿಎಂ ಕುರ್ಚಿಯಲ್ಲಿ ನಿರ್ಲಜ್ಜವಾಗಿ ಮೆರೆದ ನಿಮ್ಮ ಕತ್ತಲೆ ಚಾರಿತ್ರ್ಯ ಕೊಳೆತು ನಾರುತ್ತಿದೆ. ನಿಮ್ಮ ಕೈಲಿ ಮಿರಮಿರ ಮಿಂಚಿದ ಹ್ಯೂಬ್ಲೆಟ್ ವಾಚ್ ಎಲ್ಲಿಂದಾ ಬಂತು? ಕಳ್ಳಮಾಲು ಮಾಲೀಕನಿಗೆ ಸೇರದೆ ನಿಮ್ಮ ಅಮೃತಹಸ್ತ ಅಲಂಕರಿʼಸಿದ್ದುʼ ಹೇಗೆ? ಆ ವಾಚ್ ತಂದ್ಕೊಟ್ಟ ಪೊಲೀಸಯ್ಯನಿಗೆ ವರ್ಗಾವಣೆ ಕೃಪೆ ಕರುಣಿಸಿದಿರಾ? ಎಂದವರು ಪ್ರಶ್ನಿಸಿದ್ದಾರೆ.