ಬೆಂಗಳೂರು: ಬೆಂಗಳೂರಿನಲ್ಲಿಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಸಂಸದರು, ಶಾಸಕರು ಹಾಗೂ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ವೀರಶೈವ ಲಿಂಗಾಯತ ಸಮುದಾಯವನ್ನು ಸಾಮಾಜಿಕ ಸಮೀಕ್ಷೆಯ ಹೆಸರಿನಲ್ಲಿ ಬಿರುಕು ಮೂಡಿಸುವ ಕುತಂತ್ರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಹುನ್ನಾರವನ್ನು ಖಂಡಿಸಲಾಯಿತು.
ಸಭೆಯ ತೀರ್ಮಾನಗಳ ಬಗ್ಗೆ ಮಾಹಿತಿ ಹಂಚಿಕೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಮಾಜಿಕ ಸಮೀಕ್ಷೆಯ (ಜಾತಿ ಜನಗಣತಿಯ) ನೆಪದಲ್ಲಿ ಜಾತಿ ಹಾಗೂ ಉಪ ಜಾತಿಗಳ ಹೆಸರಿನಲ್ಲಿ ಸಮಾಜ ಒಡೆಯುವ ನೀಚತನಕ್ಕೆ ಇಳಿದಿದೆ. ವೀರಶೈವ ಸಮುದಾಯದ ಒಳ ಪಂಗಡಗಳ ನಡುವೆ ಧರ್ಮದ ಹೆಸರಿನಲ್ಲಿ ಈ ಹಿಂದೆಯೂ ಕಿಚ್ಚು ಹಚ್ಚಿಸುವ ಕೀಳು ಕಾರ್ಯಕ್ಕೆ ಇಳಿದಿದ್ದನ್ನು ಸಮುದಾಯ ಮರೆತಿಲ್ಲ, ತನ್ನ ಚಾಳಿಯನ್ನು ಇನ್ನೂ ಬಿಡದ ಕಾಂಗ್ರೆಸ್ ಸರ್ಕಾರ ಸಮುದಾಯದ ನಡುವೆ ಗೊಂದಲ ಮೂಡಿಸುವುದನ್ನು ಪ್ರಮುಖ ಕಾರ್ಯ ಸೂಚಿಯನ್ನಾಗಿಸಿಕೊಂಡಿದೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಸಮುದಾಯದ ಒಗ್ಗಟ್ಟು ಕಾಯ್ದುಕೊಳ್ಳಲು ಅನಗತ್ಯ ಗೊಂದಲ ಮೂಡಿಸುವ ಚಟುವಟಿಕೆಗಳಿಗೆ ಇತಿಶ್ರೀ ಹಾಡಲು ಸಮಾಜ ಒಗ್ಗಟ್ಟು ಪ್ರದರ್ಶಿಸುವುದು, ಜಾತಿ ಸಮೀಕ್ಷೆಯ ಹೆಸರಿನಲ್ಲಿ ಗೊಂದಲ ಮೂಡಿಸುವ ಕುತಂತ್ರವನ್ನು ಮೆಟ್ಟಿನಿಲ್ಲುವ ನಿಟ್ಟಿನಲ್ಲಿ ಸಮುದಾಯದ ವಿವಿಧ ಮಠಾಧೀಶರು ಹಾಗೂ ಹರಗುರು ಚರಮೂರ್ತಿಗಳ ಮಾರ್ಗದರ್ಶನದಲ್ಲಿ ಒಟ್ಟಾಗಿ ಮುನ್ನಡೆಯಲು ತೀರ್ಮಾನಿಸಲಾಯಿತು ಎಂದವರು ತಿಳಿಸಿದರು.
ಸಮಾಜವನ್ನು ಒಡೆಯುವ ಕಾಂಗ್ರೆಸ್ ಸರ್ಕಾರದ ಚಿತಾವಣೆ ಹಾಗೂ ಪಿತೂರಿಯನ್ನು ಸಮಾಜದ ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಎಚ್ಚರಿಕೆಯ ನಡೆ ಪ್ರದರ್ಶಿಸಬೇಕು ಹಾಗೂ ಒಗ್ಗಟ್ಟು ಸಾಧಿಸಿ ಸಮಾಜದ ಹಿತ ಕಾಯಬೇಕೆಂಬ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು ಎಂದವರು ತಿಳಿಸಿದರು.



















































