ಬೆಂಗಳೂರು : ರಾಯಚೂರು, ಯಾದಗಿರಿ ಹಾಗೂ ಕಲಬುರಗಿಯ ಚಿಂಚೋಳಿಯಲ್ಲಿ ಅಪೌಷ್ಟಿಕತೆ ನಿವಾರಣೆಗೆ ನಿರ್ದಿಷ್ಟ ಕ್ರಮಗಳನ್ನು ಜರುಗಿಸಲಾಗುವುದು ಹಾಗೂ ಈ ಬಾರಿಯ ಆಯವ್ಯಯದಲ್ಲಿ ಅಗತ್ಯ ಅನುದಾನವನ್ನು ಮೀಸಲಿರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನೀತಿ ಆಯೋಗದ (ಎಸ್.ಜಿ.ಡಿ) ಸಲಹೆಗಾರರಾದ ಸನ್ಯುಕ್ತ ಸಮದ್ದಾರ್ ಅವರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಆರೋಗ್ಯ, ಶಿಕ್ಷಣ ಹಾಗೂ ಜೀವನದ ಗುಣಮಟ್ಟದ ಸುಧಾರಣೆಗೆ ಅಗತ್ಯ ಅನುದಾನವನ್ನು ಮುಂದಿನ ಆಯವ್ಯಯದಲ್ಲಿ ಮೀಸಲಿರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬಡತನವನ್ನು ಕೇವಲ ಆದಾಯದ ಮೇಲೆ ಅವಲಂಬಿಸದೆ, ಆರೋಗ್ಯ, ಶಿಕ್ಷಣ ಹಾಗೂ ಜೀವನ ಗುಣಮಟ್ಟದಂತಹ ಬಹು ಆಯಾಮಗಳನ್ನು ಆಧರಿಸಿ, ಬಡತನದ ಗುಣಮಟ್ಟ ಹಾಗೂ ಪರಿಮಾಣವನ್ನು ನಿರ್ಧರಿಸಲಾಗುತ್ತದೆ ಎಂದು ನೀತಿ ಆಯೋಗದ ಸಲಹೆಗಾರರು ವಿವರಿಸಿದರು.
2019 ರಲ್ಲಿ 66 ಇದ್ದ ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕ ಪ್ರಸ್ತುತ 72ಕ್ಕೆ ಏರಿದ್ದು, ಆರೋಗ್ಯ ವಿಮೆ, ಹದಿಹರೆಯದ ಹೆಣ್ಣುಮಕ್ಕಳಲ್ಲಿ ಅಪೌಷ್ಟಿಕತೆ, ಗರ್ಭಿಣಿ ಮಹಿಳೆಯರಲ್ಲಿ ಅಪೌಷ್ಟಿಕತೆ, ಗ್ರಾಮೀಣ ಮನೆಗಳಿಗೆ ಕುಡಿಯುವ ನೀರು ಸರಬರಾಜು, ಸ್ವಚ್ಛ ಅಡುಗೆ ಅನಿಲ ಪೂರೈಕೆಯಲ್ಲಿ ಕರ್ನಾಟಕ ರಾಜ್ಯ ಸುಧಾರಣೆ ಕಾಣಬೇಕಿದೆ. ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಇವುಗಳ ಬಗ್ಗೆ ಕೇಂದ್ರೀಕೃತವಾಗಿ ಕೆಲಸ ಮಾಡಲು ಬಹು ಆಯಾಮ ಬಡತನ ಸೂಚಕಗಳು (ಎಂ.ಪಿ.ಐ) ಸಹಾಯಕ ವಾಗಿವೆ ಎಂದು ನೀತಿ ಆಯೋಗದ ಸಲಹೆಗಾರರು ತಿಳಿಸಿದರು.
ಈ ಕಾರ್ಯಕ್ಕೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಸಹಕಾರವನ್ನು ಪಡೆದು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಸಚಿವ ಮುನಿರತ್ನ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ: ಅಮಿತಾ ಪ್ರಸಾದ್, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ಮತ್ತಿತರರು ಉಪಸ್ಥಿತರಿದ್ದರು.