ವಿಜಯನಗರ: ಒಗ್ಗಟ್ಟಿನಿಂದ ಮಂತ್ರದೊಂದಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೆಲಸ ಮಾಡುವ ಮೂಲಕ ಭಾಜಪ ವಿಜಯಕ್ಕೆ ಮುನ್ನುಡಿ ಬರೆಯುವ ಸಂಕಲ್ಪವನ್ನು ತೊಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.
ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಅವರು ಶನಿವಾರ ಮಾತನಾಡಿ, ಒಗ್ಗಟ್ಟಿನಿಂದ ಶ್ರಮಿಸಿ, ವಿಜಯಯಾತ್ರೆಯನ್ನು ಕೈಗೊಳ್ಳೋಣ. ಇದು ಕರ್ನಾಟಕದ ಬಡವರ ವಿಜಯವಾಗುತ್ತದೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣವಾಗುತ್ತದೆ ಎಂದರು.
ನಮ್ಮ ನಾಯಕರಾದ ನರೇಂದ್ರ ಮೋದಿ, ಅಮಿತ್ ಷಾ, ಜೆ.ಪಿ.ನಡ್ಡಾ ಅವರ ಕೈಯನ್ನು ಎಲ್ಲಾ ದೃಷ್ಟಿಯಿಂದಲೂ ಬಲಪಡಿಸಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಕರ್ನಾಟಕದಿಂದ ಒಂದು ಟ್ರಿಲಿಯನ್ ಡಾಲರ್ ಕೊಡುಗೆಯನ್ನು ನೀಡುವಂತೆ ಮಾಡೋಣ. ದಾರಿ ತಪ್ಪಿಸುವ ವಿರೋಧ ಪಕ್ಷಕ್ಕೆ ಸೊಪ್ಪು ಹಾಕದೆ, ಸ್ಪಷ್ಟವಾಗಿರುವ ನಮ್ಮ ಗುರಿ, ದಾರಿ ಸಂಕಲ್ಪ ಮತ್ತು ಬಲಿಷ್ಠವಾದ ಸಂಘಟನೆ ಮೇಲೆ ವಿಶ್ವಾಸವಿಟ್ಟು ಮುನ್ನಡೆಯೋಣ. ವಿಜಯಪತಾಕೆ ಹಾರಿಸಿಸೋಣ ಎಂದರು.
ಕಾಂಗ್ರೆಸ್ಸಿನವರ ಹಗರಣಗಳು ಜೀವಂತ:
2023 ಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಮುಳುಗುತ್ತದೆ. ಜನರ ಮುಂದೆ ಯಾವ ಮುಖ ಇಟ್ಟುಕೊಂಡು ಹೋಗುತ್ತಾರೆ. ಅವರ ಕಾಲದ ಹಗರಣಗಳು ಇನ್ನು ಜೀವಂತ ಇವೆ. ಯಾವ ಇಲಾಖೆಯಲ್ಲಿ ನೋಡಿದರೂ ಅಲ್ಲಿ ಹಗರಣ ಮಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಬಗ್ಗೆ ಮಾತಾಡುತ್ತಾರೆ. ಅಲ್ಲಿ ಅವರು ಮಾಡಿದ ಹಗರಣಗಳು ಕಡಿಮೆ ಇವೆಯೇ. ದಿಂಬು ಹಾಸಿಗೆಯನ್ನೂ ಬಿಡಲಿಲ್ಲ. ಯಾವ ಇಲಾಖೆಯಲ್ಲಿ ಭ್ರಷ್ಟಾಚಾರ ಇರಲಿಲ್ಲ ಅವರ ಕಾಲದಲ್ಲಿ. ಸ್ಟೀಲ್ ಸೇತುವೆಯನ್ನು ನಿರ್ಮಿಸಲು ಹೊರಟರು. ಎಲ್ಲಾ ವ್ಯವಹಾರಗಳನ್ನು ಮಾಡಿ, ಅದು ಬಹಿರಂಗವಾದಾಗ ಅದನ್ನು ಕೈಬಿಡುವ ನಾಟಕ ಮಾಡಿದರು ಎಂದವರು ಕೈನಾಯಕರ ಆರೋಪಗಳಿಗೆ ಎದಿರೇಟು ನೀಡಿದರು.
ವಿರೋಧ ಪಕ್ಷದ ಸತ್ಯ ಹರಿಶ್ಚಂದ್ರನ ದಾಖಲೆಗಳನ್ನು ಜನರ ಮುಂದಿಡಬೇಕಾಗುತ್ತದೆ. ನಾವು ಇದನ್ನು ನೈತಿಕತೆಯಿಂದ ಜನರ ಮುಂದೆ ತೆಗೆದುಕೊಂಡು ಹೋಗಬೇಕು. ಬಹಳ ಶುದ್ಧಹಸ್ತರು ಎಂಬಂತೆ ಮಾತನಾಡುತ್ತಿದ್ದಾರೆ. ಇದನ್ನು ಧೈರ್ಯವಾಗಿ ಎದುರಿಸಿ. ಜನರ ಬಳಿ ಸತ್ಯವನ್ನು ಹೇಳಬೇಕಾಗುತ್ತದೆ. ಎಲ್ಲಾ ಪ್ರಕರಣಗಳಲ್ಲಿ ಸತ್ಯ ಹೊರಗೆ ಬರಲಿದೆ. ವಿರೋಧಪಕ್ಷದವರು ಸತ್ಯವನ್ನು ಎದುರಿಸುವ ಕಾಲ ಬರುತ್ತದೆ, ಸಿದ್ಧರಾಗಿರಿ ಎಂದು ವಿರೋಧಪಕ್ಷದವರಿಗೆ ಹೇಳಿದ್ದೇನೆ. ಸತ್ಯದ ವಿಚಾರವನ್ನು ಕನ್ನಡಿಯಂತೆ ಇಟ್ಟಾಗ ನಿಮ್ಮ ಮುಖವಾಡ ಕರ್ನಾಟಕದ ಜನರ ಎದುರಿಗೆ ಕಳಚಿ ಬೀಳಲಿದೆ. ಅವರ ಕಪಾಟಿನಲ್ಲಿ ಭ್ರಷ್ಟಾಚಾರದ ಅಸ್ಥಿಪಂಜರಗಳಿವೆ ಎಂದವರು ಹೇಳಿದರು.
ಅಭಿವೃದ್ಧಿಯ ಅಜೆಂಡಾ:
ನಾವು ಅಭಿವೃದ್ಧಿಯ ಅಜೆಂಡಾವನ್ನು ಮುಂದಿಟ್ಟುಕೊಂಡು 2023 ರ ಚುನಾವಣೆಗೆ ಹೋಗುತ್ತೇವೆ. ಪ್ರತಿ ಗ್ರಾಮ, ಬಡವರು, ದೀನದಲಿತರಿಗೆ ಮಾಡಿರುವ ಕಾರ್ಯಕ್ರಮ, ಮಹಿಳೆಯರು, ಯುವಕರಿಗೆ ನೀಡಿರುವ ಬೆಂಬಲವನ್ನು ತೆಗೆದುಕೊಂಡು ಜನರ ಮುಂದೆ ಹೋಗುತ್ತೇವೆ. ನಾವು ಮಾಡಿರುವ ಕೆಲಸಗಳು ಮಾಡುತ್ತಿರುವ ಕಾರ್ಯಕ್ರಮಗಳು, ಸಾರ್ವಜನಿಕ ಜೀವನದಲ್ಲಿ ಭಾಜಪ ನಡೆದುಕೊಂಡ ರೀತಿ ನಮ್ಮ ಶಕ್ತಿ. ಸಕಾರಾತ್ಮಕ ರಾಜಕಾರಣವನ್ನು ಭಾಜಪ ಮಾಡುತ್ತದೆ. ಸಕಾರಾತ್ಮಕ ಆಡಳಿತವನ್ನು ಭಾಜಪ ಸರ್ಕಾರ ಕೊಡುತ್ತಿದೆ. ಇವೆಲ್ಲವನ್ನು ಜನರ ಮುಂದಿಟ್ಟು, ಜನರ ವಿಶ್ವಾಸವನ್ನು ಪಡೆದು ಪುನ: ಕರ್ನಾಟಕದಲ್ಲಿ ಕಮಲವನ್ನು ಅರಳಿಸಿ ವಿಧಾನಸೌಧದ 3 ನೇ ಮಹಡಿಯಲ್ಲಿ ಭಾಜಪ ಸರ್ಕಾರ ಸ್ಥಾಪನೆ ಮಾಡುತ್ತೇವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ಭಾಜಪ ದೇಶದಲ್ಲಿ ಜನಮಾಸನಗಳಲ್ಲಿ ಶಾಶ್ವತವಾದ ಸ್ಥಾನವನ್ನು ಗಳಿಸಿರುವ ರಾಜಕೀಯ ಪಕ್ಷ. ಇದರ ವಿಚಾರಧಾರೆಗಳು ಜನರಿಗೆ ಮನಮುಟ್ಟುವ ರೀತಿಯಲ್ಲಿ ನಮ್ಮ ಕಾರ್ಯಕರ್ತರು ಮುಟ್ಟಿಸಿದ್ದಾರೆ. ಪ್ರಾರಂಭದಲ್ಲಿ ಭಾ.ಜ.ಪದ ಬಗ್ಗೆ ಪ್ರಚಾರಕ್ಕಿಂತ ಅಪಪ್ರಚಾರ ಹೆಚ್ಚಿತ್ತು. ಕ್ರಮೇಣ ಆಡಳಿತದಲ್ಲಿರುವ ಪಕ್ಷಗಳ ಆಶ್ವಾಸನೆಗಳು, ಜನರನ್ನು ಮತಬ್ಯಾಂಕ್ ಗಳನ್ನಾಗಿ ಮಾಡುವ ರಾಜಕಾರಣ, ಸಮಾಜವನ್ನು ಒಡೆಯುವ ರಾಜಕಾರಣ, ದೇಶವನ್ನು ಶಿಥಿಲಗೊಳಿಸುವ ರಾಜಕಾರಣ, ಭಾರತದ ಉದ್ದಗಲಕ್ಕೂ ಗೊತ್ತಾಗಿ, ಇನ್ನಾದರೂ ಈ ದೇಶವನ್ನು, ಜನರನ್ನು ರಕ್ಷಣೆ ಮಾಡಲು ಸುಬಧ್ರವಾದ ಪ್ರಜಾಪ್ರಭುತ್ವದ ವ್ಯವಸ್ಥೆ ನೆಲೆಗೊಳ್ಳಲು, ತತ್ವಸಿದ್ಧಾಂತಗಳ ಮೇಲೆ ರಾಜಕಾರಣವಾಗಬೇಕಾದರೆ, ದೀನದಲಿತರ ಉದ್ದಾರವಾಗಬೇಕಾದರೆ ಕೇವಲ ಭಾ.ಜ.ಪ ದಿಂದ ಮಾತ್ರ ಸಾಧ್ಯ ಎಂದು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಮನದಟ್ಟಾಗಿದೆ ಎಂದರು.