ಬೆಂಗಳೂರು: ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಾಣು ಹಾವಳಿ ಕೇರಳದಲ್ಲಿ ಆತಂಕಕಾರಿ ಸನ್ನಿವೇಶ ಸೃಷ್ಟಿಸಿದೆ. ಇದೀಗ ರಾಜ್ಯದಲ್ಲೂ ಭೀತಿಯ ಅಲೆ ಎಬ್ಬಿಸಿದೆ.
ರಾಜ್ಯದಲ್ಲಿ ಇಳಿಮುಖದತ್ತ ಸಾಗಿದ್ದ ಕೊರೋನಾ ಪ್ರಕರಣಗಳ ಸಂಖ್ಯೆ ಇದೀಗ ದಿಢೀರ್ ಏರಿಕೆಯಾಗಿದೆ. ಬುಧವಾರದ ಅಂಕಿ ಅಂಶ ಗಮನಿಸಿದರೆ 3ನೇ ಅಲೆಯ ಅಬ್ಬರದ ಆತಂಕ ಸೃಷ್ಟಿಯಾಗಿದೆ.
ಬುಧವಾರ ಸಂಜೆಯ ಹೆಲ್ತ್ ಬಲೆಟಿನ್ ಪ್ರಕಾರ ಆ ವರೆಗಿನ 24 ಗಂಟೆಯಲ್ಲಿ ರಾಜ್ಯದಲ್ಲಿ 1116 ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 29,64,083ಕ್ಕೆ ಏರಿಕೆಯಾಗಿದೆ. ಮಂಗಳವಾರದವರೆಗೂ ಒಂದು ಸಾವಿರದೊಳಗಿದ್ದ ಸಂಖ್ಯೆ ದಿಢೀರನೆ ಏರಿಕೆಯಾಗಿದೆ.
ಮಹಾಮಾರಿಗೆ ಒಂದೇ ದಿನ 8 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ 37,537ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.